ಪುಣೆ-ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಗೆ ಆ ವೀಡಿಯೋ ನೋಡಿ ಅಚ್ಚರಿಯಾಗಿತ್ತು. ಇಳಿವಯಸ್ಸಿನಲ್ಲಿ ರಸ್ತೆಯ ಪಕ್ಕದಲ್ಲಿ ನಿಂತು ಎರಡು ದಂಡ ಕೈಯಲ್ಲಿ ಹಿಡಿದುಕೊಂಡು ರಭಸದಲ್ಲಿ ತಿರುಗಿಸುವ ಅಜ್ಜಿ. ಹಾಗಂತ, ಏಕಾಏಕಿ ದಂಡವನ್ನು ಸುಮ್ಮನೆ ತಿರುಗಿಸುತ್ತಿಲ್ಲ. ತಾಲೀಮ್ ಮಾಡುವ ಶೈಲಿಯಲ್ಲೇ ದಂಡವನ್ನು ಬಿರುಸಿನ ವೇಗದಲ್ಲಿ ತಿರುಗಿಸುತ್ತಿದ್ದ ಅಜ್ಜಿ, ಭಿಕ್ಷೆ ಬೇಡುತ್ತಿದ್ದರು. ಈ ವೀಡಿಯೋ ವೈರಲ್ ಆಗಿತ್ತು, ಇದನ್ನು ದೇಶ್ ಮುಖ್ ತನ್ನ ಟ್ವೀಟರ್ ನಲ್ಲಿ ಹಂಚಿಕೊಂಡು ಅಜ್ಜಿಯ ಗುರುತು ಪತ್ತೆಗೆ ಮುಂದಾದರು.
ಪುಣೆಯಲ್ಲಿದ್ದಾರೆ 85 ವರ್ಷದ ಅಜ್ಜಿ
ಹಸಿವು ನೀಗಿಸಲು ರಸ್ತೆಯಲ್ಲಿ ತಾಲೀಮು
ರಿತೇಶ್ ದೇಶ್ ಮುಖ್ ಟ್ವೀಟ್ ಬೆನ್ನಲ್ಲೇ ಈ ಅಜ್ಜಿ ಪುಣೆಯ ಮುಖ್ಯ ರಸ್ತೆಯ ಪಕ್ಕದಲ್ಲಿರುವುದು ತಿಳಿದುಬಂದಿದೆ. ಈ ಅಜ್ಜಿಯನ್ನು ಶಾಂತಾ ಬಾಲು ಪವರ್ ಅಂತ ಗುರುತಿಸಲಾಗಿದ್ದು, ಸಾಲುಂಕೆ ವಿಹಾರ್ ರಸ್ತೆಯಲ್ಲಿ ಇವರು ಕಾಣ ಸಿಗುತ್ತಾರೆ. ಅಲ್ಲದೇ, ಅದೆಷ್ಟೋ ಯುವಕರಿಗೆ ಇವರ ಈ ಕಸರತ್ತು ಸ್ಫೂರ್ತಿ ನೀಡಿವೆ ಅಂತ, ದೇಶ್ ಮುಖ್ ಟ್ವೀಟ್ ಗೆ ರಿ ಟ್ವೀಟ್ ಮಾಡಿದ್ದಾರೆ.

ಜೋಪಡಿಯಲ್ಲಿ ವಾಸ ಮಾಡುತ್ತಿರುವ ಅಜ್ಜಿ ಹಿಂದೆ ಜಾನಪದ ನೃತ್ಯಗಳನ್ನು ಮಾಡುತ್ತಿದ್ದರು ಎನ್ನಲಾಗಿದೆ.ಈಗ ಈ ಅಜ್ಜಿಯ ದಂಡದ ಕಸರತ್ತು ಸೆಲೆಬ್ರಿಟಿಗಳ ಕಣ್ಣಿಗೆ ಬಿದ್ದಿದೆ. ಈ ಹಿಂದೆಯೂ ಕೂಡ ಅಜ್ಜಿಯನ್ನು ಸ್ಥಳೀಯ ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದ್ದವು.

ಹೀಗೆ ಸಾಮಾಜಿಕ ಜಾಲ ತಾಣದ ಒಂದು ವೀಡಿಯೋ, ವಿಶೇಷ ಪ್ರತಿಭೆಗಳನ್ನು ಗುರುತಿಸಲು ನೆರವಾಗುತ್ತೆ. ಈ ಅಜ್ಜಿಯಿಂದ ಯುವಕರು ಈ ಕಸರತ್ತನ್ನು ಕಲಿಯುವಂತಾಗಲಿ. ಈ ಕಲೆ ಭಿಕ್ಷೆ ಬೇಡದೇ ಇವರ ಹಸಿವು ನೀಗಿಸುವಂತಾಗಲಿ.