ಈ ಲೇಖನವನ್ನು ಓದುವ ಮುನ್ನ ನಿಮ್ಮ ಗುಂಡಿಗೆಯನ್ನು ಗಟ್ಟಿ ಮಾಡಿಕೊಳ್ಳಲೇಬೇಕು. ಇದನ್ನು ಓದುತ್ತಾ ಹೋಗುತ್ತಿದ್ದಂತೆ ಒಂದು ಕ್ಷಣ ನಿಮ್ಮ ಹೃದಯವೇ ಸ್ತಂಭೀಬೂತವಾಗಬಹುದು. ನಿಮ್ಮ ಹೃದಯಬಡಿತ ಇನ್ನಷ್ಟು ಜೋರಾಗಬಹುದು. ಅಬ್ಬಾ ಈ ಯೋಧನ ಸಾಹಸವೇ… ಸಾಕ್ಷ್ಯಾತ್ ಅಭಿಮನ್ಯು ಚಕ್ರವ್ಯೂಹವನ್ನು ಭೇದಿಸಿ ದುರ್ಯೋಧನನ ಸೈನ್ಯವನ್ನು ಧ್ವಂಸ ಮಾಡಿದಂತೆ ಸ್ವತಃ ಅಭಿಮನ್ಯುವೇ ಮೈಯಲ್ಲಿ ಆವೇಶ ಬಂದಂತೆ ವರ್ತಿಸಿಬಿಟ್ಟ. ದೇಹಕ್ಕೆ 18 ಗುಂಡು ಹೊಕ್ಕಿದ್ದರೂ, ಒಂದು ಕೈ ತುಂಡಾಗಿದ್ದರೂ ಬರೋಬ್ಬರಿ 48 ಪಾಕಿಸ್ತಾನಿ ಸೈನಿಕರನ್ನು ಯಮಪುರಿಗಟ್ಟಿ ಕಾರ್ಗಿಲ್ ಯುದ್ಧ ಗೆದ್ದಿದ್ದ.
ದಿಗೇಂದ್ರ ಕುಮಾರ್.. ರಜಪೂತ ರೈಫಲ್ಸ್‍ನ ಎರಡನೇ ಬೆಟಾಲಿಯನ್‍ನ ಕಮಾಂಡರ್
ಅದು 1999ರ ಕಾರ್ಗಿಲ್ ಯುದ್ಧದ ಸಂದರ್ಭ. ಪಾಕಿಸ್ತಾನಿ ಸೈನಿಕರು ದ್ರಾಸ್ ಸೆಕ್ಟರ್‍ನ ತೋಲೊಲಿಂಗ್ ಬೆಟ್ಟದ ಪಾಯಿಂಟ್ 4590 ಎಂಬ ಪ್ರದೇಶವನ್ನು ಪಾಕಿಸ್ತಾನದ ಪಡೆ ವಶಪಡಿಸಿಕೊಂಡಿತ್ತು. ಇದರ ಎತ್ತರವೇ ಬರೋಬ್ಬರಿ 15000 ಅಡಿ.
ಕದನ ವಿರಾಮವನ್ನು ಉಲ್ಲಂಘಿಸಿ, ಒಪ್ಪಂದವನ್ನು ಉಲ್ಲಂಘಿಸಿದ್ದ ಪಾಕಿಸ್ತಾನ ಈ ಪ್ರದೇಶವನ್ನು ವಶಪಡಿಸಿಕೊಂಡಿತ್ತು. ಈ ಪ್ರದೇಶವನ್ನು ವಶಪಡಿಸಲೇಬೇಕಿತ್ತು. ಆದರೆ ಈ ಪ್ರದೇಶ 15000 ಅಡಿ ಎತ್ತರವಿರುವುದರಿಂದ ಅಷ್ಟೊಂದು ಸುಲಭದಲ್ಲಿ ಮರುವಶಪಡಿಸುವಂತಿರಲಿಲ್ಲ. ಯಾಕೆಂದರೆ ಪಾಕಿಗಳು ಎತ್ತರದಿಂದ ಒಂದು ಕಲ್ಲನ್ನು ಉರುಳಿಸಿದರೂ ಭಾರತದ ಸೈನಿಕರ ಜೀವ ಹೋಗುತ್ತಿತ್ತು. ಈ ಪ್ರದೇಶವನ್ನು ವಶಪಡಿಸಿಕೊಳ್ಳುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಆದರೆ ವಶಪಡಿಸದೇ ವಿಧಿಯೇ ಇರಲಿಲ್ಲ.
ರಜಪೂತ ರೈಫಲ್ಸ್‍ನ ಎರಡನೇ ಬೆಟಾಲಿಯನ್‍ನ ಮುಖ್ಯಸ್ಥ ವಿವೇಕ್ ಗುಪ್ತಾ ಅವರಲ್ಲಿ ಈ ಪ್ರದೇಶವನ್ನು ಮರುವಶಪಡಿಸುವಂತೆ ಸೇನಾ ಮುಖ್ಯಸ್ಥರು ಆದೇಶಿಸಿದ್ದರು.
ಆದೇಶಕ್ಕಾಗಿಯೇ ಕಾಯುತ್ತಿದ್ದ ಮೇಜರ್ ದಿಗೇಂದ್ರ ಕುಮಾರ್ ಪಾಕಿಗಳನ್ನು ಧ್ವಂಸ ಮಾಡಬೇಕೆಂದು ಪಣತೊಟ್ಟರು. ಇವರ ಜೊತೆ ಅತೀವ ಉತ್ಸಾಹಿ ಯೋಧರಾದ ಸುಬೇದಾರ್ ಭನ್ವರ್‍ಲಾಲ್ ಭಕರ್, ಸುಬೇದಾರ್ ಸುರೇಂದ್ರ ಸಿಂಗ್ ರಾತೋರ್, ಲ್ಯಾನ್ಸೆ ನಾಯಕ್, ನಾಯಕ್ ಸುರೇಂದ್ರ, ನಾಯಕ್ ಚಮನ್ ಸಿಂಗ್ ತೆವಾಟಿಯಾ, ಲಾನ್ಸ್ ನಾಯಲ್ ಬಚ್ಚನ್ ಸಿಂಗ್, ಸಿಎಂಎಚ್ ಜಶ್ವಿರ್ ಸಿಂಗ್, ಹವಾಲ್ದಾರ್ ಸುಲ್ತಾನ ಸಿಂಗ್ ನರ್ವಾರ್ ಹಾಗೂ ದಿಗೇಂದ್ರ ವಿವೇಕ್‍ಗೆ ಸಾಥ್ ನೀಡಿದರು. ಇದರಲ್ಲಿ ದಿಗೇಂದ್ರ ಕುಮಾರ್ ಅವರು ಲೈಟ್ ಮಿಷಿನ್ ಗನ್ ಗುಂಪಿನ ಕಮಾಂಡೋ ಆಗಿದ್ದರು.
ಬೆಟಾಲಿಯನ್ ಬೆಟ್ಟವನ್ನು ತಲುಪಿದ್ದು ಹೇಗೆ ಗೊತ್ತೇನು?
ತೊಲೋಲಿಂಗ್ ಬೆಟ್ಟಕ್ಕೆ ವಕ್ಕರಿಸಿದ್ದ ಪಾಕಿಗಳನ್ನು ಮುಗಿಸಲೇಬೇಕಾದ ಅನಿವಾರ್ಯತೆ ಭಾರತದ ಸೇನಾಪಡೆ ಸಿಲುಕಿತ್ತು. ಆದರೆ ಈ ಪ್ರದೇಶವನ್ನು ಪುನಃ ತೆಕ್ಕೆಗೆ ಪಡೆಯುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಆದರೆ ಈ ಪ್ರದೇಶವನ್ನು ಮರುವಶಪಡಿಸದೇ ಇದ್ದರೆ ಕಾರ್ಗಿಲ್‍ನಲ್ಲಿ ಗೆಲ್ಲುವಂತೆಯೇ ಇರಲಿಲ್ಲ. ಒತ್ತಡವೆಂದರೆ ಒತ್ತಡ..
ಇದೇ ಸಂದರ್ಭದಲ್ಲಿ ಜನರಲ್ ಮಲಿಕ್ ರಜಪೂತ ರೈಫಲ್ಸ್ ಜೊತೆ ಗುಮ್ರಿ ಎಂಬಲ್ಲಿ ಸಭೆ ನಡೆಸಿದರು. ಜನರಲ್ ಅವರು ಪರಿಸ್ಥಿತಿ ಹೇಗಿದೆ ಎಂಬುವುದನ್ನೂ ಸ್ಪಷ್ಟವಾಗಿ ವಿವರಿಸಿದ್ದರು. ಆಗ ಮುಂದೆಬಂದವರೇ ಕಮಾಂಡರ್ ಆಗಿದ್ದ ದಿಜೇಂದ್ರ ಕುಮಾರ್… ಈ ಸಂದರ್ಭದಲ್ಲಿ ದಿಜೇಂದ್ರ ಕುಮಾರ್ ಅವರು ತನ್ನನ್ನು ತಾನು ಕೋಬ್ರಾ ಎಂದು ಪರಿಚಯಿಸಿದರು. ತಾವು ಬೆಟ್ಟವನ್ನು ಪುನಃ ವಶಪಡಿಸಲು ತಂತ್ರವೇನೆಂಬುವುದನ್ನು ವಿವರಿಸಿದರು.
ಈ ವೇಳೆ ದಿಗೇಂದ್ರ ಕುಮಾರ್ ಅವರ ತಂತ್ರವನ್ನು ನೀಡಿ ಜನರಲ್ ಮಲಿಕ್ ಪ್ರಭಾವಿತರಾಗಿದ್ದಲ್ಲದೆ ಒಂದು ಕ್ಷಣ ಅಚ್ಚರಿಯಿಂದ ಅವಾಕ್ಕಾಗಿದ್ದರು. ಕಾರ್ಯತಂತ್ರಕ್ಕೆ ಉತ್ಸಾಹದಿಂದಲೇ ಸಿದ್ಧತೆಯನ್ನು ಮಾಡಲಾಯಿತು. ಕೆಲವೊಂದು ಅವಶ್ಯಕ ವಸ್ತುಗಳನ್ನು ತೆಗೆದುಕೊಳ್ಳಲಾಯಿತು.
ಬೆಟ್ಟ ಹತ್ತುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಅದಕ್ಕಾಗಿಯೇ ದಿಗೇಂದ್ರ ಕುಮಾರ್ ಅವರು ಆಯಾಸವನ್ನು ನಿವಾರಿಸುವಂತಹಾ ಚುಚ್ಚುಮದ್ದು ಬೇಕೆಂದು ಒತ್ತಾಯಿಸಿದ್ದರು. ಎಲ್ಲವೂ ಅಂದುಕೊಂಡಂತೆ ನಡೆಯಿತು. ಇನ್ನು ಕಾರ್ಯಾಚರಣೆಯೊಂದೇ ಬಾಕಿ… ಕೊನೆಯಬಾರಿಗೆ ಅವಲೋಕನ ಮಾಡಿಕೊಂಡು ಪಾಕಿಗಳನ್ನು ಸದೆಬಡಿಯಲು ಹೊರಟೇ ಬಿಟ್ಟಿತು ಬೆಟಾಲಿಯನ್… ರಜಪೂತ್ ಬೆಟಾಲಿಯನ್ ಬೆಟ್ಟ ಹತ್ತಲಾರಂಭಿಸಿತು. ಹತ್ತುವ ಮುಂಚೆ ಶತ್ರುಸೈನಿಕರಿರುವ ಜಾಗವನ್ನು ದುರ್ಬೀನುಗಳ ಸಹಾಯದಿಂದ ವೀಕ್ಷಿಸಿ ಮೌಲ್ಯಮಾಪನ ನಡೆಸಲಾಯಿತು.
ಮಲಿಕ್ ಅವರ ಕಣ್ಣುಗಳಲ್ಲಿ ನೀರು ತನ್ನಿಂತಾನೇ ಧಾರಾಕಾರವಾಗಿ ಇಳಿಯುತ್ತಿತ್ತು. ಆದರೂ ಅದನ್ನು ಅವರು ತೋರಿಸಲಿಲ್ಲ. ತಮ್ಮ ಹುಡುಗರನ್ನು ಮತ್ತೆ ನೋಡುತ್ತೇವೆಯೋ ಇಲ್ಲವೋ ಎಂಬ ಧೈರ್ಯವಿಲ್ಲದಿರುವಾಗ ಅವರ ಕಣ್ಣುಗಳಲ್ಲಿ ನೀರು ಉಕ್ಕುವುದು ಸಾಮಾನ್ಯವೇ ಆಗಿತ್ತು.
ಯೋಧರು ಹೊರಡುವ ಮುಂಚೆ ಮಲಿಕ್ ಅವರು ದಿಗೇಂದ್ರರನ್ನು ಕರೆದು, `ಮಗಾ ನಮ್ಮ ವಿಜಯಕ್ಕೆ ನಮಗಿನ್ನು 48 ಗಂಟೆಗಳು ಬಾಕಿ ಉಳಿದಿವೆ. ನಾವು ಕಾರ್ಗಿಲ್ ಅನ್ನು ಗೆಲ್ಲಲೇಬೇಕು. ನಾಳೆ ಬೆಳಿಗ್ಗೆ ಒಟ್ಟಿಗೆ ಬ್ರೇಕ್‍ಫಾಸ್ಟ್ ಮಾಡೋಣ… ನಾನೇ ನಿಮಗೆ ಉಪಹಾರವನ್ನು ತರುತ್ತೇನೆ. ಎಲ್ಲರಿಗೂ ಕಂಗ್ರಾಜುಲೇಶನ್…’ ಎಂದು ಯೋಧರನ್ನು ಹುರಿದುಂಬಿಸಿ ಕಳುಹಿಸಿದರು.
ಕಾರ್ಗಿಲ್‍ನ ಬಹುಪಾಲು ಬೆಟ್ಟವನ್ನು ಪಾಕಿಸ್ತಾನ ಸ್ವಾಧೀನಪಡಿಸಿಕೊಂಡಿತ್ತು. ಈ ಪ್ರದೇಶವನ್ನು ವಶಪಡಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಯಾಕೆ ಗೊತ್ತೆ? ಶತ್ರು ಸೈನಿಕರು ಬೆಟ್ಟದ ತುದಿಯಲ್ಲಿದ್ದು, ಕೆಳಗಿನಿಂದ ಬರುವ ಭಾರತದ ಸೈನಿಕರನ್ನು ಸುಲಭದಲ್ಲಿ ಮುಗಿಸಬಹುದಿತ್ತು. ಇದೇ ನಂಬಿಕೆಯನ್ನು ಹೊಂದಿದ್ದ ಪಾಕಿಸ್ತಾನ ಈ ಸಲ ಭಾರತವನ್ನು ಸುಲಭವಾಗಿ ಸೋಲಿಸಬಹುದೆಂಬ ಹಗಲುಕನಸನ್ನು ಕಾಣುತ್ತಿತ್ತು.
ಯುದ್ಧ ಆರಂಭವಾಗಿಯೇ ಬಿಟ್ಟಿತು…!
ಎಲ್ಲಾ ಉಪಕರಣಗಳೊಂದಿಗೆ ಬೆಟಾಲಿಯನ್ ಜಾಗರೂಕತೆಯಿಂದ ಹತ್ತಿದರು. 16000 ಅಡಿ ಅಂದರೆ ಅದು ಸಾಮಾನ್ಯವೇ… ಸ್ವಲ್ಪ ಏಮಾರಿದರೂ ಶತ್ರುಗಳಿಗೆ ಸುಳಿವು ಸಿಕ್ಕಿ ಬಿಡುತ್ತದೆ. ಅದಕ್ಕಾಗಿಯೇ ಉಗುರುಗಳು ಮತ್ತು ಹಗ್ಗದ ಸಹಾಯದಿಂದ ಬಂಡೆಯನ್ನು ಹತ್ತಿದರು. ಶಕ್ತಿ ಕುಂದಂತೆ ಅಗತ್ಯವಾದ ಚುಚ್ಚುಮದ್ದನ್ನು ತೆಗೆದುಕೊಂಡರು. ಬೆಟ್ಟವನ್ನು ಹತ್ತುವಾಗ ಕೈನೋವಾದಾಗ ಕೈಗಳನ್ನು ನಿಲ್ಲಿಸಿ ಹಲ್ಲುಗಳಿಂದ ಹಗ್ಗವನ್ನು ಭದ್ರವಾಗಿ ಹಿಡಿದಿದ್ದರು. ಅಂತಿಮವಾಗಿ 16 ಗಂಟೆಗಳ ನಂತರ ಟೋಲೋಲಿಂಗ್ ಬೆಟ್ಟವನ್ನು ಅದ್ಹೇಗೋ ತಲುಪಿದರು. ವಾಸ್ತವವಾಗಿ ಬೆಟ್ಟವನ್ನು ಮುಟ್ಟಲು 24 ಗಂಟೆಗಳು ಬೇಕಿತ್ತು. ಕೆಳಗಡೆ 5000 ಅಡಿ ಆಳದ ಕಂದಕ. ಸ್ವಲ್ಪ ಏಮಾರಿದರೂ ಮೂಳೆಗಳೂ ಕೂಡಾ ಸಿಗಲಿಕ್ಕಿಲ್ಲ. ಆದರೆ ನಮ್ಮ ತಾಯಿನಾಡನ್ನು ರಕ್ಷಿಸುವ ಪ್ರೇರಣೆಯಿಂದ ಬರೇ 16 ಗಂಟೆಗಳಲ್ಲಿ ಬೆಟ್ಟವನ್ನು ಬರೇ ಹಗ್ಗದಲ್ಲೇ ಯಶಸ್ವಿಯಾಗಿ ಹತ್ತಿದ್ದರು.
ಬೆಟ್ಟವನ್ನು ಹತ್ತುತ್ತಿದ್ದಂತೆ ಹಸಿದ ವ್ಯಾಘ್ರನಂತೆ ಘರ್ಜಿಸಿಯೇ ಬಿಟ್ಟರು. ಮೈಯ್ಯಲ್ಲಿ ವೀರ ರಜಪೂತ ದೊರೆಗಳು ಆವೇಶಬಂದಂತೆ ಶತ್ರುಗಳನ್ನು ಮುಗಿಸಲು ಅಣಿಯಾದರು. ಇಷ್ಟೆಲ್ಲಾ ಆಗಿದ್ದರೂ ಪಾಕಿಗಳಿಗೆ ಇದರ ಅರಿವೇ ಆಗಿರಲಿಲ್ಲ.
ಕಮಾಂಡರ್ ದಿಜೇಂದ್ರ ಕುಮಾರ್ ಅವನ ಗನ್ ಘರ್ಜಿಸಲು ಆರಂಭವಾಯಿತು. ಪಾಕಿಗಳು ಅಲ್ಲಿ ಒಟ್ಟು 11 ಬಂಕರ್‍ಗಳನ್ನು ನಿರ್ಮಿಸಿದ್ದರು. ಶತ್ರುಗಳ ಅರಿವಿಗೆ ಬರುವ ಮುನ್ನವೇ ದಿಗೇಂದ್ರ ಅವರು ಮೊದಲ ಮತ್ತು 9ನೆಯ ಬಂಕರ್‍ಗಳನ್ನು ಸುಟ್ಟುಹಾಕಿದ್ದರು. ಉಳಿದ ಬಂಕರ್‍ಗಳನ್ನು ನಾಶಪಡಿಸುವುದು ಉಳಿದ ಭಾರತದ ಸೈನಿಕರ ಕೆಲಸವಾಗಿತ್ತು.
ಭಾರತೀಯ ಸೈನಿಕರು ದಾಳಿ ಮಾಡಲು ಪ್ರಾರಂಭಿಸಿದರು; ದಿಗೇಂದ್ರ ಅವರು ಯಶಸ್ವಿಯಾಗಿ ಬಂಕರ್ ನಾಶಪಡಿಸುವುದನ್ನು ಕಂಡು ಉತ್ಸಾಹಗೊಂಡ ಉಳಿದ ಸೈನಿಕರು ಉಳಿದ ಬಂಕರ್‍ಗಳನ್ನು ಉಡಾಯಿಸಿಬಿಟ್ಟಿದ್ದರು. ಒಟ್ಟು 18 ಗ್ರೆನೈಡ್‍ಗಳಿಂದ 11 ಬಂಕರ್ ನಾಶವಾಗಿತ್ತು.
ಆದರೆ ಈ ವೇಳೆ ಶತ್ರುಗಳು ಎಚ್ಚರಗೊಂಡಿದ್ದು, ದಿಗೇಂದ್ರರ ಮೇಲೆ ಗುಂಡಿನ ಮಳೆ ಸುರಿಸಿದರು. ಮೊದಲ ಮೂರು ಗುಂಡುಗಳು ದಿಗೇಂದ್ರರ ಎದೆಗೆ ಹೊಕ್ಕಿತು. ಎದೆಯನ್ನು ತೀವ್ರವಾಗಿ ಗಾಯಮಾಡಿಕೊಂಡು ರಕ್ತ ಚಿಮ್ಮಿತು. ಗುಂಡಿನ ನೋವಿನಿಂದ ಆಯಾಸ ಪರಿಹರಿಸಬೇಕೆನ್ನುವಷ್ಟರಲ್ಲಿ ಇನ್ನಷ್ಟು ಗುಂಡುಗಳು ದಿಗೇಂದ್ರರ ಎದೆಯನ್ಮು ಹೊಕ್ಕಲಾರಂಭಿಸಿತು. ಒಟ್ಟು 18 ಗುಂಡುಗಳು ದೇಹದ ಮೇಲೆಲ್ಲಾ ಹೊಕ್ಕಿದ್ದವು. ಅದರಲ್ಲಿ ಒಂದು ಗುಂಡಿನಿಂದ ಕಾಲಿನಲ್ಲಿದ್ದ ಬೂಟು ಕಾಣೆಯಾಗಿತ್ತು. ಸಮವಸ್ತ್ರ ಹರಿದು ಚಿಂದಿಯಾಗಿತ್ತು. ಅವರ ಕೈಯ್ಯಲ್ಲಿದ್ದ ಬಂದೂಕು ಕೂಡಾ ಕಾಣೆಯಾಗಿರುವುದನ್ನು ಅರಿತುಕೊಂಡರು. ಇಷ್ಟಾದರೂ ಧೃತಿಗೆಡಲೇ ಇಲ್ಲ. ಕೊನೆಯ ಆಸರೆ ಎಂಬಂತೆ ಎಲ್‍ಎಂಜಿ ಬಂದೂಕು ಮಾತ್ರ ಆಸರೆಯಾಗಿತ್ತು…
ಇತ್ತ ಈ ಪರಿಸ್ಥಿತಿಯಾಗಿದ್ದರೆ ಮತ್ತೊಂದು ಕಡೆ ಇದಕ್ಕಿಂತ ಭಿನ್ನ ಪರಿಸ್ಥಿತಿ ಇತ್ತು. ಸುಬೇದಾರ್ ಭಾನ್ವರ್ ಲಾಲ್ ಭಾಕರ್, ಲಾನ್ಸ್ ನಾಯ್ಕ್ ಜಾಸ್ವಿರ್ ಸಿಂಗ್, ನಾಯ್ಕ್ ಸುರೇಂದ್ರ, ಮತ್ತು ನಾಯ್ಕ್ ಚಮನ್ ಸಿಂಗ್ ಹುತಾತ್ಮರಾಗಿದ್ದರು. ಲಾನ್ಸ್ ನಾಯ್ಕ್ ಬಚನ್ ಸಿಂಗ್ ಮತ್ತು ಸುಲ್ತಾನ್ ಗ್ರೆನೈಡ್ ಹಾಗೂ ಪಿಸ್ತೂಲನ್ನು ನೀಡಲಾಯಿತು. ಮೇಜರ್ ವಿವೇಕ್ ಗುಪ್ತಾ ಕೂಡ ತಲೆಗೆ ಬಿದ್ದಿದ್ದರಿಂದ ಹುತಾತ್ಮರಾಗಿದ್ದರು.
ಇಂಥಾ ಸ್ಥಿತಿಯಲ್ಲೂ ದಿಗೇಂದ್ರ ಅವರು ವಿಚಲಿತರಾಗಲಿಲ್ಲ. ಉಳಿದಿದ್ದ ಎಲ್ಲಾ ಬಂಕರ್‍ಗಳನ್ನು ಧ್ವಂಸ ಮಾಡಿದರು. ಶತ್ರು ಸೈನ್ಯದ ಕಮಾಂಡರ್ ಮೇಜರ್ ಅನ್ವರ್ ಖಾನ್ ದಿಗೇಂದ್ರನ ಮುಂದೆ ಬಂದಿದ್ದ. ಈ ವೇಳೆ ದಿಗೇಂದ್ರ ಬಳಿ ಇದ್ದದ್ದು ಬರೇ ಒಂದೇ ಬುಲೆಟ್. ವ್ಯರ್ಥ ಮಾಡುವಂತಿರಲಿಲ್ಲ. ಪಿಸ್ತೂಲಿನಿಂದ ಬುಲೆಟ್ ಸಿಡಿಸಿದರು. ಆದರೆ ಅದು ವ್ಯರ್ಥವಾಯಿತು. ಆದರೂ ದೃತಿಗೆಡದ ದಿಗೇಂದ್ರ ಅವರು ಅನ್ವರ್‍ನ ಮೇಲೆ ಹಾರಿ ಆತನನ್ನು ಕೊಂದು ಬಿಟ್ಟರು.. ಯುದ್ಧ ಮುಗಿದು ನೋಡುವಾಗ ದಿಗೇಂದ್ರ ಅವರ ಕೈಯಿಂದ 48 ಪಾಕಿಸ್ತಾನಿ ಸೈನಿಕರು ಹೆಣವಾಗಿದ್ದರು.
ಅಂತಿಮವಾಗಿ ಶತ್ರುಗಳು ನಾಶವಾಗಿದ್ದಾರೆಂದು ಅರ್ಥೈಸಿಕೊಂಡ ದಿಗೇಂದ್ರ ಕುಮಾರ್, ತಾನು ಯುದ್ಧ ಗೆದ್ದಿರುವುದನ್ನು ಅರಿತುಕೊಂಡಿದ್ದರು. ಅಂದ ಹಾಗೆ ಅದು 1999 ರ ಜೂನ್ 13. ಅದೇ ದಿನ ಭಾರತೀಯ ತ್ರಿವರ್ಣ ಧ್ವಜವನ್ನು ಬೆಳಿಗ್ಗೆ ನಾಲ್ಕು ಗಂಟೆಯವರೆಗೆ ಹಾರಿಸಿದರು. 1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ 48 ಪಾಕಿಸ್ತಾನಿ ಸೈನಿಕರನ್ನು ಮುಗಿಸಿದ್ದ ಏಕೈಕ ಭಾರತೀಯ ಕಮಾಂಡರ್ ಆಗಿದ್ದಾರೆ. ಇದೊಂದು ನಿಜಕ್ಕೂ ನೆನಪಿಸಿಕೊಂಡಿರಬಹುದಾದ ಘಟನೆಯಾಗಿದ್ದು, ಪ್ರತೀ ಭಾರತೀಯರು ನೆನಪಿಟ್ಟುಕೊಳ್ಳಲೇಬೇಕಾದ ಘಟನೆ.
ದಿಗೇಂದ್ರ ಅವರು ಕೋಬ್ರಾ ಎಂಬ ಹೆಸರು ಪಡೆಯಲು ಕಾರಣವೇನು?
ಇದಕ್ಕಿಂತ ಮುಂಚೆ ದಿಗೇಂದ್ರ ಅವರನ್ನು ಶ್ರೀಲಂಕಾದಲ್ಲಿ ಶಾಂತಿ ಕಾಪಾಡಲು ಕಳಿಸಲಾಗಿತ್ತು. ಅಲ್ಲಿ ಅವರು ಸಾಮಾನ್ಯ ಸಿಬ್ಬಂದಿಯಾಗಿದ್ದರು. ಲಂಕಾದ ಓಪನ್ ಆರ್ಮಿ ಜೀಪಲ್ಲಿ ಕುಳಿತಾಗ, ಎಲ್ಟಿಟಿಇ ಭಯೋತ್ಪಾದಕ ಜೀಪಿಗೆ ಗ್ರನೈಡ್ ಎಸೆದಿದ್ದ. ಆದರೆ ಅದು ಸ್ಫೋಟಗೊಳ್ಳುವ ಮೊದಲು ಅದನ್ನು ಕ್ಯಾಚ್ ಹಿಡಿದ ದಿಗೇಂದ್ರ ಅವರು ವಾಪಸ್ ಉಗ್ರನತ್ತ ಎಸೆದರು. ಆಗ ಭಯೋತ್ಪಾದನಕ ತಲೆ ಸ್ಪೋಟಗೊಂಡು ಎರಡು ತುಂಡಾಯಿತು. ದಿಗೇಂದ್ರರ ಸೈನ್ಯ ಕೋಬ್ರಾಕ್ಕಿಂತ ಅಪಾಯಕಾರಿ ಎಂದು ಭಾವಿಸಿ ಬಳಿಕ ಅವರಿಗೆ ಕೋಬ್ರಾ ಎಂದು ಕರೆಯಲಾಯಿತು.
ಗಿರೀಶ್ ಮಳಲಿ

ಹವ್ಯಾಸಿ ಬರಹಗಾರ