ಅಮಾವಾಸ್ಯೆ ಯ ದಿನ ರಾತ್ರಿಯಲ್ಲಿ ಚಿಕ್ಕಮಗಳೂರಿನಿಂದ ಧರ್ಮಸ್ಥಳದ ಕಡೆಗೆ ಹೊಚ್ಚಹೊಸ ರಾಯಲ್ ಎನ್ಫೀಲ್ಡ್ ಬುಲ್ಲೆಟ್ ಬೈಕ್ ನಲ್ಲಿ ಒಬ್ಬನೇ ಹೊರಟೆ. ದಾರಿಮಧ್ಯೆ ಸಿಗುವ ಸದಾ ಚಳಿಚಳಿಯಾಗಿರುವ ಊರಾದ ಕೊಟ್ಟಿಗೆಹಾರದಲ್ಲಿ ಬಿಸಿಬಿಸಿಯಾದ ಚಹಾ ಜೊತೆಗೆ ಸ್ವಲ್ಪ ತಣ್ಣಗೆ ಆಗಿದ್ದ ನೀರ್ ದೋಸೆ ಯನ್ನು ತಿಂದು ಕಿವಿಗೆ ಇಯರ್ ಫೋನ್ ಸಿಕ್ಕಿಸಿ ಹೋಗ್ತಾ ಇದ್ದೇ ಒಂದು ಹತ್ತು ಕಿಲೋಮೀಟರ್ (ಸರಿಯಾಗಿ ಜ್ಞಾಪಕವಿಲ್ಲಾ) ಹೋಗಿದ್ದೇನೋ ಏನೋ ಇದ್ದಕ್ಕಿದ್ದಾಗೆ ಬೈಕ್ ನ ಹೆಡ್ ಲೈಟ್ ಆಫ್ ಆಯ್ತು,
ಇಂಡಿಕೇಟರ್ ಹಾಕಿಕೊಂಡು ಸ್ವಲ್ಪ ದೂರ ಹೋಗುವ ಪ್ರಯತ್ನ ಮಾಡಿದೆ ಆದರೆ ಗರ್ಗುಂಡಿ ಕತ್ತಲೆಯ ಮಧ್ಯೆ ಬಾನಿನಿಂದ ತೇಲಿಬರುತ್ತಿದ್ದ ಮಿಸ್ಟ್ ನಿಂದಾಗಿ ಒಂದಡಿ ದೂರವೂ ಕಾಣದಾಯಿತು. ನನ್ನ ಒಳಮನಸ್ಸು ಹೇಳತೊಡಗಿತು, ಯಾಕೆ ಇಷ್ಟೊಂದು ಕಷ್ಟಪಟ್ಟು ಹೋಗ್ತಾ ಇದ್ದೀಯಾ ಅಂತ ಅಷ್ಟೊತ್ತಿಗೆ ಅದೇನಾಯ್ತೋ ಗೊತ್ತಿಲ್ಲಾ ಕೆಟ್ಟೋಗಿದ್ದ ಹೆಡ್ ಲೈಟ್ ಉರಿತು ಆದರೆ ಬೈಕ್ ತನ್ನೆಲ್ಲಾ ಕಾರ್ಯವನ್ನು ಅಲ್ಲೇ ನಿಲ್ಲಿಸಿತು!.ಏನು ಮಾಡಿದರೂ ಬುಲ್ಲೆಟ್ ಸ್ಟಾರ್ಟ್ ಆಗಲಿಲ್ಲಾ, ಏನು ಮಾಡೋದು? ಆ ಅಮವಾಸ್ಯೆ ಯ ರಾತ್ರಿ ಒಬ್ಬನೇ ಆ ಘಾಟ್ ನಲ್ಲಿ ನಿಲ್ಲೋದಾದ್ರು ಹೇಗೆ? ಮೊಬೈಲ್ನಲ್ಲಿ ಇದ್ದ ಟಾರ್ಚ್ ಲೈಟ್ ಬೆಳಕಿನಲ್ಲಿ ಚಾರ್ಮಾಡಿ ಕಡೆಗೆ ಮೆಲ್ಲನೆ ಹೆಜ್ಜೆ ಹಾಕುತ್ತಾ ಹೊರಟೆ, ಏನು ಮಾಡೋದು ಒಂದುಕಡೆ ನೀರಿನ ಶಬ್ದಗಳು ಇನ್ನೊಂದೆಡೆ ಪ್ರಾಣಿಪಕ್ಷಿಗಳ ಕೂಗಾಟ ಕೇಳಿದ್ದೇ ತಡ ಮುಂದೆ ಹೆಜ್ಜೆ ಹಾಕುವ ಬದಲು ಹೆಜ್ಜೆಗಳು ಹಿಂದೆ ಹಿಂದೆ ಜಾರ ತೊಡಗಿದವು.ಆಗೊಂದು ಈಗೊಂದು ಹೋಗುತ್ತಿದ್ದ ವಾಹನಗಳು ಕೂಡ ಕೈ ತೋರಿಸಿದರು ನಿಲ್ಲಿಸದಾದವು. ಭಯ ಹೆಚ್ಚಾಗ ತೊಡಗಿತು. ಅಲ್ಲೇ ದೂರದಲ್ಲಿ ಇದ್ದ ಕಟ್ಟೆಯಲ್ಲಿ ಕುಳಿತು ಒಬ್ಬನೇ ಅಳತೊಡಗಿದೆ.

ಚಿಕ್ಕಮಗಳೂರು ಕಡೆಯಿಂದ ಭರ್ರೆಂದು ಬಂದ ಬಿಳಿಯಾದ ಒಂದು ಟೆಂಪೋ ದೂರದಲ್ಲಿನಿಂತಾಗೆ ಭಾಸವಾಯಿತು. ತಲೆಎತ್ತಿ ನೋಡಿದೇ ಚಾಲಕ ಮೂತ್ರ ಮಾಡಲು ನಿಲ್ಲಿಸಿದ್ದೆಂದು ತಿಳಿಯಿತು. ಆಚೆಈಚೆ ನೋಡದೆ ಸರ್ರನೆ ಹೋಗಿ ಟೆಂಪೋದೊಳಗೆ ಸೇರಿಕೊಂಡುಬಿಟ್ಟೆ! ಅಬ್ಬಾ ಇನ್ನು ನಾನು ಬಚಾವ್ ಅನ್ನುವಷ್ಟರಲ್ಲಿ ಆಗಿದ್ದೇ ಬೇರೆ ಟೆಂಪೋ ಏನೋ ಮುಂದೆ ಹೋಗುತ್ತಿತ್ತು ಆದರೇ.. ನನ್ನ ಎದೆ ಬಡಿತ ಜೋರಾಗ ತೊಡಗಿತು ಎದುರಿನಿಂದ ಬರುವ ವಾಹನದ ಬೆಳಕು ಟೆಂಪೋದ ಒಳಗೆ ಅಲ್ಪಸ್ವಲ್ಪ ಬೀಳುತ್ತಿತ್ತು ಆಗ ತಿಳಿಯಿತು ಇದು ಆಂಬ್ಯುಲೆನ್ಸ್! ಇದರೊಳಗೆ ನಾನು ಮಾತ್ರಾ ಇರೋದಲ್ಲಾ! ನನ್ನ ಜೊತೆ ಇನ್ನೊಬ್ಬನಿದ್ದಾನೆ ಅಂತ. ಎದುರಿನಿಂದ ವಾಹನ ಬರೋದನ್ನೇ ಕಾಯುತ್ತಿದ್ದೆ ಸರಿಯಾಗಿ ಹನ್ನೊಂದನೇ ತಿರುವು ಎದುರಿನಿಂದ ಬಂದ ದೊಡ್ಡ ಲಾರಿಯ ಬೆಳಕು ಸರಿಯಾಗಿ ಒಳಗೆ ಬೀಳುತ್ತಿತ್ತು. ನನ್ನ ಅನುಮಾನ ನಿಜವಾಗಿತ್ತು. ಬಿಳಿಯಾದ ಬಟ್ಟೆಗಳನ್ನು ದೇಹಪೂರ್ತಿ ಸುತ್ತಿಸಿದ್ದ ಒಂದು ಮನುಷ್ಯನ ದೇಹ ಜೊತೆಗಿತ್ತು!ಚಾರ್ಮಾಡಿಯ ಮೈಕೊರೆಯುವ ಚಳಿಯಲ್ಲೂ ಮೈಯೆಲ್ಲಾ ಬೆವರು ಬರಲಾರಂಭಿಸಿತು.
ಹೇಳದೆ ಹತ್ತಿದ ತಪ್ಪಿಗೆ ಇಷ್ಟೊಂದು ಭಯಾನಕ ಶಿಕ್ಷೆಯನ್ನು ಕೊಟ್ಟದ್ದೇ ಅಂತ ಮನಸ್ಸಲ್ಲೇ ಅಂದುಕೊಂಡು ಹೆದರಿ ಹೆದರಿ ಡ್ರೈವರ್ ಅಂತ ಕೂಗಿದೆ, ಆತ ಯಾವ ಲೋಕದಲ್ಲಿ ಹೋಗುತ್ತಿದ್ದನೋ ನನ್ನ ಕೂಗು ಆತ ಕೇಳಿಸಿಕೊಂಡೇ ಇಲ್ಲಾ ಇತ್ತ ತಿರುವು ಹತ್ತರಲ್ಲಿ ಗಾಡಿ ತಿರುಗಿಸಿದ ರಭಸಕ್ಕೆ ಬಿಳಿಬಟ್ಟೆಯ ವ್ಯಕ್ತಿಯ ಒಂದು ಕೈ ಬಂದು ನನ್ನ ಕೈಯನ್ನು ಹಿಡಿದಂತಾಯಿತು! ಇದ್ದ ಅಲ್ಪಸ್ವಲ್ಪ ಧೈರ್ಯವೂ ಹುದುಗಿಹೋಯಿತು, ಒಳಗಿಂದ ಹೊರಟ ಸ್ವರಗಳು ಗಂಟಲಲ್ಲೇ ಬಾಕಿಯಾಗ ತೊಡಗಿತು, ಹೇಗೋ ಕೈಯಿಂದ ಜೋರಾಗಿ ಚಾಲಕನ ಹಿಂಬದಿಗೆ ಬಡಿಯಲಾರಂಭಿಸಿದೆ, ಪಾಪ ಆ ಚಾಲಕನಿಗೆ ನಾನು ದಾರಿಮಧ್ಯೆ ಹತ್ತಿರುವ ಸಂಗತಿ ತಿಳಿಯದೆ ಕೊಂಚ ಭಯಗೊಂಡು ತಾನು ಕೊಂಡೊಯ್ಯುತ್ತಿದ್ದ ಹೆಣವೇ ಎದ್ದು ಸದ್ದು ಮಾಡುತ್ತಿದೆ ಅಂದುಕೊಂಡ!ಭಯದಲ್ಲಿ ಗಾಡಿಯ ವೇಗವನ್ನು ಹೆಚ್ಚಿಸಿದ ಒಳಗಿದ್ದ ನನ್ನ ಬಟ್ಟೆಯೆಲ್ಲಾ ಒದ್ದೆಯಾಗತೊಡಗಿತು, ಮತ್ತೆ ಜೋರಾಗಿ ಬಡಿಯಲಾರಂಭಿಸಿದೆ ಬಹುಶಃ ಘಾಟಿಯ ಎಂಟನೇ ತಿರುವು ವೇಗವಾಗಿ ಹೋಗುತ್ತಿದ್ದ ಟೆಂಪೋ ರಪ್ ಎಂದು ನಿಂತಿತು.

ಬಾಗಿಲು ತೆಗೆದು ಹೊರಗೆ ಜಿಗಿದ ಚಾಲಕ ಒಂದೇ ಸಮನೆ ಮುಂದೆ ಮುಂದೆ ಓಡ ತೊಡಗಿದ ಮೊದಲೇ ಹೆದರಿಹೋಗಿದ್ದ ನಾನು ನಿಲ್ಲು ನಿಲ್ಲು ಎಂದು ಇದ್ದ ಶಕ್ತಿಯನ್ನು ಹಾಕಿ ಕೂಗತೊಡಗಿದೆ, ಆ ಚಾಲಕ ಮಾತ್ರ ಓಡುತ್ತಿದ್ದ ವೇಗವನ್ನೇ ಮತ್ತಷ್ಟು ಹೆಚ್ಚಿಸುತ್ತಾ ಮೆಲ್ಲಗೆ ಕುತ್ತಿಗೆಯನ್ನು ಹಿಂದೆ ತಿರುಗಿಸಿ ನೋಡಿದ ಟೆಂಪೋದೊಳಗಿದ್ದದ್ದು ದೆವ್ವನೇ, ಅದುವೇ ನನ್ನನ್ನು ಹಿಂಬಾಲಿಸುತ್ತಿದೆ ಅಂದುಕೊಂಡು ಓಡುತ್ತಿದ್ದ ವೇಗವನ್ನು ಮತ್ತಷ್ಟು ಹೆಚ್ಚಿಸಿದ, ಆದರೆ ನನ್ನಕಡೆ ತಿರುಗಿದ್ದ ಆತನ ಕತ್ತು(ಕುತ್ತಿಗೆ) ಮಾತ್ರ ತಿರುಗಿಯೇ ಇದ್ದಾಗೆ ಕಾಣಿಸಿತು. ಆತ ಮುಂದೆಮುಂದೆ ಓಡುತ್ತಿದ್ದ ಕುತ್ತಿಗೆ ಮಾತ್ರ ನನ್ನನ್ನೇ ನೋಡುತ್ತಿತ್ತು. ಆತನನ್ನು ನಿಲ್ಲಿಸಲು ಮಾಡಿದ ಪ್ರಯತ್ನ ಎಲ್ಲಾ ವಿಫಲವಾಯಿತು.ಅಮಾವಾಸ್ಯೆಯ ಕತ್ತಲಲ್ಲಿ ರಸ್ತೆಯ ತಿರುವು ತಿಳಿಯದೆ ಚಾರ್ಮಾಡಿ ಘಾಟಿಯಲ್ಲಿ 7ನೇ ತಿರುವಿನಿಂದ 6 ನೇ ತಿರುವಿಗೆ ಹೆದರಿ ಹೋಗಿದ್ದ ಚಾಲಕ ಬಿದ್ದೇ ಬಿಟ್ಟ! ನಾನು ಮಲಗಿದ್ದವ ಒಮ್ಮೆಲೇ ಎದ್ದು ಜೋರಾಗಿ ಅಯ್ಯೋ ಅಂತ ಬೊಬ್ಬೆ ಹಾಕಿದೆ! ಅಕ್ಕಪಕ್ಕದಲ್ಲಿದ್ದ ಎಲ್ಲರೂ ಒಮ್ಮೆಗೆ ಎಚ್ಚರಗೊಂಡು ಏನಾಯ್ತು! ಏನಾಯ್ತು!ಅಂತ ಕೇಳತೊಡಗಿದರು. ಆಗ ಕನಸಲ್ಲಿ ಕಂಡ ಈ ಕತೆಯನ್ನು ಮೊದಲಬಾರಿಗೆ ಎಲ್ಲರಿಗೂ ಹೇಳಿದೆ.
(ಈಗಲೂ ಚಾರ್ಮಾಡಿ ಘಾಟ್ ನ 6 ಮತ್ತು 7ನೇ ತಿರುವಿನಲ್ಲಿ ರಾತ್ರಿಹೊತ್ತು ಯಾರೋ ಕರೆದ ಹಾಗೇ ಆಗುತ್ತೇ ಅಂತ ಕೆಲವರು ಹೇಳುತ್ತಿರುತ್ತಾರೆ!)
ನನ್ನ ಬಹು ಇಷ್ಟವಾದ ಈ ಕಥೆ ಕನಸಲ್ಲಿ ಕಂಡಿದ್ದು! ಹಲವು ವರ್ಷಗಳಿಂದ ವರ್ಗ,ಶಿಭಿರಗಳಲ್ಲಿ ಸಿಕ್ಕಿದ ಸಾವಿರಕ್ಕೂ ಹೆಚ್ಚು ಯುವಮಿತ್ರರಿಗೆ ಕುತೂಹಲ ಮೂಡಿಸಿ ಭಯ ಹೋಗಿಸಲು ಇದನ್ನು ಹೇಳಿ ಖುಷಿ ಪಟ್ಟದ್ದೇ ಹೆಚ್ಚು. ಇಂತಹ ಕಥೆಗಳನ್ನು ಕೇಳಬೇಕು, ಭಯಪಡಬಾರದು, ಕಾಲ್ಪನಿಕ ಕಥೆಗಳು ಬದುಕು ಕಟ್ಟುವ ಕಾಯಕಗಳಿಗೆ ಅದೆಷ್ಟೋ ಬಾರಿ ನೆರವಾಗುತ್ತವೆ.
(ನಿಮಗೂ ಇಷ್ಟ ಆಗಿದ್ರೆ ನಾಲ್ಕು ಜನಕ್ಕೆ ಹೇಳಿ!)
- ಲೇಖಕರು-ಸುದರ್ಶನ್ ಕೆ ವಿ ಕನ್ಯಾಡಿ