ದೆಹಲಿ: ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 5ರಂದು ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ ಎಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಖಚಿತಪಡಿಸಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗುವುದು ಎಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಖಜಾಂಚಿ ಪುಣೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸುಮಾರು 3ರಿಂದ 4ಗಂಟೆಗಳ ಕಾಲ ಅಯೋಧ್ಯೆಯಲ್ಲಿ ಕಾಲ ಕಳೆಯುವ ನಿರೀಕ್ಷೆ ಇದೆ. ಇನ್ನು ಈ ವೇಳೆ ಮೋದಿ ಅಯೋಧ್ಯೆಯ ಕೆಲವು ಪ್ರಮುಖ ಸಂತರು ಮತ್ತು ಟ್ರಸ್ಟ್ ನ ಸದಸ್ಯರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕ್ಯಾಬಿನೆಟ್ ಮತ್ತು ಉತ್ತರ ಪ್ರದೇಶ ಸರ್ಕಾರದ ಕೆಲವು ಪ್ರಭಾವಿ ಸಚಿವರು ಹಾಜರಾಗಲಿದ್ದಾರೆ. ಇನ್ನು ಪ್ರಧಾನಮಂತ್ರಿಯಲ್ಲದೆ, ದೇವಾಲಯ ನಿರ್ಮಾಣದ ಪ್ರಾರಂಭದ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಉಪಸ್ಥಿತರಿರಲಿದ್ದಾರೆ ಎಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ತಿಳಿಸಿದ್ದಾರೆ.