ನವದೆಹಲಿ: ಕೊರೊನಾ ವೈರಸ್‍ದ ಪ್ರಭಾವ ಕಾರ್ಮಿಕರ ಭವಿಷ್ಯ ನಿಧಿ ಮೇಲೂ ಬಿದ್ದಿದ್ದು, ಭವಿಷ್ಯ ನಿಧಿಯಿಂದ ಹಣ ಹಿಂಪಡೆದುಕೊಳ್ಳುತ್ತಿರುವವರ ಪ್ರಮಾಣ ಹೆಚ್ಚಾಗಿದೆ. ಆದರೆ ಇದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‍ಒ)ಗೆ ತಲೆನೋವಾಗಿ ಪರಿಣಮಿಸಿತ್ತು. ಸಿಬ್ಬಂದಿಗಳ ಕೊರತೆಯಿಂದ ವೇಗವಾಗಿ ಪ್ರಕ್ರಿಯೆಗಳನ್ನು ಮುಗಿಸಲು ಪರದಾಡುವಂತಾಗಿತ್ತು. ಹೀಗಾಗಿ ಸಂಸ್ಥೆ ಇದೀಗ ಸೆಟಲ್‍ಮೆಂಟ್ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಮುಗಿಸುವ ಸಲುವಾಗಿ ಕೃತಕ ಬುದ್ದಿಮತ್ತೆಯ ಸಹಾಯವನ್ನು ಪಡೆದುಕೊಂಡಿದೆ. ಕೃತಕ ಬುದ್ದಿಮತ್ತೆ(ಆರ್ಟಿಫೀಶಿಯಲ್ ಇಂಟೆಲಿಜೆನ್ಸ್)ನ ಸಹಾಯದಿಂದ ಪೂರ್ಣಪ್ರಮಾಣದಲ್ಲಿ ಅಟೋಮೆಟಿಕ್ ಸೇವೆಯನ್ನು ಪರಿಚಯಿಸಲಾಗಿದ್ದು, ಇದರಿಂದ ಇಪಿಎಫ್‍ಒದ ಸೆಟಲ್‍ಮೆಂಟ್ ಪ್ರಕ್ರಿಯೆ ಸರಿಸುಮಾರು 10 ದಿನದಿಂದ 3 ದಿನಗಳಿಗೆ ಇಳಿಕೆಯಾಗಿದೆ. ಇಲ್ಲಿಯವರೆಗೆ ಶೇ.54ರಷ್ಟು ಕ್ಲೇಮ್‍ಗಳನ್ನು ಅಟೋಮೆಟಿಕ್ ಮೋಡ್‍ನ ಮೂಲಕವೇ ಒದಗಿಸಲಾಗಿದೆ. ಭವಿಷ್ಯದಲ್ಲೂ ಈ ಸೇವೆಯ ಸಹಾಯದಿಂದ ಸೆಟಲ್‍ಮೆಂಟ್ ಪ್ರಕ್ರಿಯೆಯ ಸಮಯಾವಧಿ ಭಾರಿ ಪ್ರಮಾಣದಲ್ಲಿ ಕಡಿತ ಕಾಣುವ ಸಾಧ್ಯತೆಯಿದೆ.
36 ಲಕ್ಷ ಕ್ಲೇಮ್‍ಗಳ ಸೆಟಲ್‍ಮೆಂಟ್:
ಲಾಕ್‍ಡೌನ್‍ನ ಸಮಸ್ಯೆ, ಸಿಬ್ಬಂದಿಗಳ ಕೊರತೆಯ ಹೊರತಾಗಿಯೂ ಕಳೆದೆರಡು ತಿಂಗಳ ಅವಧಿಯಲ್ಲಿ ಇಪಿಎಫ್‍ಒ 36.02 ಲಕ್ಷ ಕ್ಲೇಮ್‍ಗಳ 11,540 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ. ಇದರಲ್ಲಿ 15.54 ಲಕ್ಷ ಕ್ಲೇಮ್‍ಗಳ 4,580 ಕೋಟಿ ರೂ.ಗಳನ್ನು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೋವಿಡ್- 19 ಅಡ್ವಾನ್ಸ್ ಸೌಲಭ್ಯದಡಿ ಹಂಚಿಕೆ ಮಾಡಲಾಗಿದೆ.
ಏನಿದು ಕೋವಿಡ್-19 ಅಡ್ವಾನ್ಸ್?
ಇಪಿಎಫ್‍ಒದ ಸದಸ್ಯರಿಗೆ ಅದರಲ್ಲೂ ಪ್ರಮುಖವಾಗಿ ಮಾಸಿಕ 15 ಸಾವಿರ ಮತ್ತು ಅದಕ್ಕಿಂತ ಕಡಿಮೆ ವೇತನ ಪಡೆದುಕೊಳ್ಳುತ್ತಿರುವವರಿಗೆ ಕೇಂದ್ರದಿಂದ ನೀಡಲಾಗಿರುವ ಮಹತ್ವದ ಸೌಲಭ್ಯ ಕೋವಿಡ್- 19 ಅಡ್ವಾನ್ಸ್. ಇದರ ಮೂಲಕ ನೌಕರರಿಗೆ ಮೂರು ತಿಂಗಳ ಅವಧಿಯ ಅವರ ಮೂಲ ವೇತನ ಮತ್ತು ಡಿಎ ಅಥವಾ ಇಪಿಎಫ್ ಖಾತೆಯಲ್ಲಿರುವ ಶೇ.75ರಷ್ಟನ್ನು ಪಡೆದುಕೊಳ್ಳುವ ಅವಕಾಶ ನೀಡಲಾಗಿತ್ತು. ವೇತನ ಮತ್ತು ಖಾತೆಯಲ್ಲಿರುವ ಶೇ.75ರಷ್ಟು ಹಣದಲ್ಲಿ ಯಾವುದು ಕಡಿಮೆ ಇದೆಯೋ ಅದನ್ನು ನೀಡಲಾಗುತ್ತಿತ್ತು.