ಮುರುಡೇಶ್ವರ- ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಶಿಕ್ಷಣ ತಜ್ಞ, ಯಶಸ್ವಿ ಉದ್ಯಮಿಯಾಗಿ ಸ್ಫೂರ್ತಿದಾಯಕರಾಗಿದ್ದ ಬಂಟ ಸಮುದಾಯದ ನಾಯಕ ಮುರ್ಡೇಶ್ವರದ ಆರ್ ಎನ್ ಶೆಟ್ಟಿಯವರು ಇಂದು ಮುಂಜಾನೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. 92 ವಯಸ್ಸಿನವರಾಗಿದ್ದ ಆರ್ ಎನ್ ಶೆಟ್ಟಿಯವರ ಜೀವನವೇ ಯುವ ಸಮುದಾಯಕ್ಕೆ ದಾರಿದೀಪವಾಗಿದೆ.
ರಾಮ ನಾಗಪ್ಪ ಶೆಟ್ಟಿಯವರು ಮುರುಡೇಶ್ವರದ ಕೃಷಿ ಕುಟುಂಬದಲ್ಲಿ ಜನಿಸಿದ್ರು. ಮುರುಡೇಶ್ವರದ ದೇವಾಲಯದ ಅನುವಂಶೀಯ ಮುಕ್ತೇಶರರಾಗಿ ಆರ್ ಎನ್ ಶೆಟ್ಟಿಯವರ ತಂದೆ ಕಾರ್ಯ ನಿರ್ವಹಿಸುತ್ತಿದ್ರು. ಫ್ರೌಢ ಶಿಕ್ಷಣವನ್ನು ಮುಗಿಸಿದ ನಂತರ ಶಿರಸಿಯಲ್ಲಿ ಗುತ್ತಿಗೆದಾರರಾಗಿ ಆರ್ ಎನ್ ಶೆಟ್ಟಿಯವರು ತಮ್ಮ ಉದ್ಯೋಗ ಆರಂಭಿಸಿದ್ರು.
ಮುರುಡೇಶ್ವರನ ಜಗದ್ವಿಖ್ಯಾತಿಗೆ ಆರ್ ಎನ್ ಶೆಟ್ಟಿ ಕಾರಣ
ಮುರುಡೇಶ್ವರ ದೇವಾಲಯದ ನವೀಕರಣಕ್ಕೆ ಒತ್ತು ಕೊಟ್ಟ ಉದ್ಯಮಿ ಆರ್ ಎನ್ ಶೆಟ್ಟಿಯವರು 249 ಅಡಿ ಎತ್ತರದ ರಾಜಗೋಪುರ ನಿರ್ಮಿಸಲು ಶ್ರಮಿಸಿದ್ರು. ಅರಬ್ಬಿ ಸಮುದ್ರದ ತಪ್ಪಲಲ್ಲಿ ಶಿವನ 123 ಅಡಿ ಎತ್ತರದ ಶಿವನ ಪ್ರತಿಮೆ ನಿರ್ಮಿಸಿ, ವಿಶ್ವವೇ ಮುರುಡೇಶ್ವರದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
ಹೊಟೇಲ್ ಉದ್ಯಮ, ಶಿಕ್ಷಣ ಕ್ಷೇತ್ರದಲ್ಲೂ ಆರ್ ಎನ್ ಎಸ್ ಗ್ರೂಪ್ ಬಹುದೊಡ್ಡ ಸಾಧನೆಗೈದಿದೆ. ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಒದಗಿಸುವಲ್ಲೂ ಅವರು ನೆರವಾಗಿದ್ದಾರೆ. ಸಮಾಜಮುಖಿ, ಲೋಕೋಪಕಾರಿಯಾಗಿ ಜನಮನ್ನಣೆ ಗಳಿಸಿದ್ದ ಆರ್ ಎನ್ ಶೆಟ್ಟಿಯವರ ನಿಧನ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ.