ಬೆಳ್ತಂಗಡಿ- ಒಂದು ಕಡೆ ಕೊರೊನಾ ಭೀತಿ, ವ್ಯಾಪಾರಿಗಳಿಗೆ ವ್ಯಾಪಾರವಿಲ್ಲ, ಅದೆಷ್ಟೋ ಜನರಿಗೆ ಉದ್ಯೋಗವೂ ಇಲ್ಲ, ಕೈಯಲ್ಲಿ ಕಾಸಿಲ್ಲ, ಖರ್ಚಿಗೆ ಏನು ಮಾಡುವುದೋ ತೋಚುತ್ತಿಲ್ಲ. ಹೀಗಿರುವಾಗ ಪ್ರತಿ ಮನೆಯಲ್ಲಿಯೂ ಕೂಡ ಎಚ್ಚರವಹಿಸಲೇಬೇಕಾಗಿದೆ. ಜನರು ಹೀಗೆ ಮಾತನಾಡುತ್ತಿರುವಾಗಲೇ ಧರ್ಮಸ್ಥಳ ಗ್ರಾಮದ ನೀರಚಿಲುಮೆಯಲ್ಲಿ ಅಂದಾಜು 25ಲಕ್ಷಕ್ಕೂ ಹೆಚ್ಚು ಹಣ ಒಡವೆಯನ್ನು ದರೋಡೆ ಮಾಡಿರುವ ಘಟನೆ ನಡೆದಿದೆ.

ಧರ್ಮಸ್ಥಳ ಗ್ರಾಮದ ನೀರ ಚಿಲುಮೆಯ ಅಚ್ಯುತ ಭಟ್ ಎಂಬ ಅಡಿಕೆ ವ್ಯಾಪಾರಿಯ ಮನೆಗೆ ನಡು ರಾತ್ರಿ ದರೋಡೆಕೋರರು ಎಂಟ್ರಿಯಾಗಿದ್ದು, ಮನೆಯವರನ್ನು ಕಟ್ಟಿಹಾಕಿ ಹಣ,ಒಡವೆಯನ್ನು ದೋಚಿಕೊಂಡು ಹೋಗಿದ್ದಾರೆ. ಅಂದಾಜು 40 ಪವನ್ ಚಿನ್ನ,1 ಕೆಜಿಯಷ್ಟು ಬೆಳ್ಳಿ ಹಾಗೂ 25 ಸಾವಿರ ನಗದು ದರೋಡೆ ಮಾಡಿದ್ದಾರೆ ಅಂತ ಆರೋಪಿಸಲಾಗಿದೆ. ಈ ವೇಳೆ ಅಚ್ಯುತ ಭಟ್ ರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ರವರ ನೇತೃತ್ವದಲ್ಲಿ ಈಗಾಗ್ಲೇ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಕಳ್ಳರಿಗಾಗಿ ಬಲೆ ಬೀಸಿದ್ದಾರೆ. ಕಳ್ಳರು ದರೋಡೆ ಮಾಡುವ ವೇಗದಲ್ಲಿ ಬಿಟ್ಟುಹೋದ ಕೆಲ ವಸ್ತುಗಳು ಪೊಲೀಸರ ತನಿಖೆ ನೆರವು ನೀಡುವ ಸಾಧ್ಯತೆಯಿದೆ.