ಕರ್ನಾಟಕದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯುವುದು ಅಂದ್ರೆ ಅದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾತ್ರ. ಆದರೆ ಈಗ ಉತ್ತರಕನ್ನಡ ಜಿಲ್ಲೆಗೊಂದು ಸಿಹಿಸುದ್ದಿ ಸಿಗುವ ಸೂಚನೆ ಸಿಕ್ಕಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಕಾರವಾರದಲ್ಲಿ ನೂತನ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣ ಮಾಡುವುದಕ್ಕೆ ಯೋಚನೆ ಮಾಡಿದೆ.

ಈ ಕುರಿತಾಗಿ ಕೆ ಎಸ್ ಸಿ ಎ ಅಧ್ಯಕ್ಷ ರೋಜರ್ ಬಿನ್ನಿ ಅವರು ರಾಜ್ಯದ ಸಚಿವ ಶಿವರಾಮ್ ಹೆಬ್ಬಾರ್ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಉತ್ತರಕನ್ನಡ ಜಿಲ್ಲೆಯವರಾದ ಹೆಬ್ಬಾರ್ ಅವರೊಂದಿಗೆ ಕೆ ಎಸ್ ಸಿ ಎ ಅಧ್ಯಕ್ಷರು ಅಂತರಾಷ್ಟ್ರೀಯ ಸ್ಟೇಡಿಯಂ ನಿರ್ಮಾಣದ ಕುರಿತು ಚರ್ಚಿಸಿದರು.

ಈ ವೇಳೆ ಕಾರವಾರದಲ್ಲಿ ಕ್ರಿಕೆಟ್ ಮೈದಾನ ನಿರ್ಮಾಣ ಮಾಡುವುದಕ್ಕೆ ಅಗತ್ಯವಿರುವ ಜಾಗ, ಸೌಕರ್ಯಗಳನ್ನು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಗೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಈ ಮೂಲಕ ಕಾರವಾರದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದ ನಿರ್ಮಾಣದ ಈ ಕುರಿತು ಸರ್ಕಾರ ಹಾಗೂ ಕೆ ಎಸ್ ಸಿ ಎ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಖುಷಿ ನೀಡಿದೆ.ಈ ಸಂದರ್ಭದಲ್ಲಿ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನ ಕಾರ್ಯದರ್ಶಿ ಸಂತೋಷ್ ಮೆನನ್ ಕೂಡ ಹಾಜರಿದ್ದರು.