ಮಂಗಳೂರು: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಾಲ್ಕು ದಿನ ಭಕ್ತರಿಗೆ ನಿಷೇಧ ಹೇರಲಾಗಿದೆ. ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವದ ಹಿನ್ನೆಲೆಯಲ್ಲಿ ಡಿಸೆಂಬರ್ 17 ರಿಂದ ಡಿಸೆಂಬರ್ 20ರವರೆಗೆ ಭಕ್ತರ ಪ್ರವೇಶ ನಿಷೇಧ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.
ಕೊರೋನಾ ವೈರಸ್ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಇನ್ನು ಮುಂಗಡ ನೋಂದಣಿ ಮಾಡಿಸಿದ ಭಕ್ತರಿಗೆ ಕೇವಲ ರಥೋತ್ಸವ ಸೇವೆಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತಾಧಿಕಾರಿ ಯತೀಶ್ ಉಳ್ಳಾಲ್ ವಿನಂತಿ ಮೇರೆಗೆ ಮುಂಗಡ ನೋಂದಣಿ ಅವಕಾಶ ಪ್ರಕಟಣೆ ಹೊರಡಿಸಿದ್ದು, 50 ಸಾವಿರಕ್ಕೂ ಹೆಚ್ಚಿನ ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.