ಬೆಂಗಳೂರು: ಕೊರೊನಾ ವೈರಸ್ ನಿಂದಾಗಿ ವಿಶ್ವದಾದ್ಯಂತ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.. ಪ್ರತಿ ರಾಷ್ಟ್ರ ಹಾಗೂ ರಾಜ್ಯಗಳು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಇತ್ತ ಕರ್ನಾಟಕವೂ ಕೂಡ ಆರ್ಥಿಕ ಪರಿಸ್ಥಿತಿಯನ್ನು ಸಮತೋಲ ಮಾಡಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ಲಾಕ್ ಡೌನ್ ಬಳಿಕ ದೇವಸ್ಥಾನಕ್ಕೂ ಮೊದಲು ಮದ್ಯದಂಗಡಿಯನ್ನು ತೆರೆಯಲು ಅವಕಾಶ ನೀಡಿತ್ತು. ಆದರೆ ಈಗ ಮದ್ಯ ಪ್ರಿಯರು ಸರ್ಕಾರಕ್ಕೆ ಬಿಗ್ ಶಾಕ್ ನೀಡಿದ್ದಾರೆ.
ಕೊರೊನಾದಿಂದಾಗಿ ರಾಜ್ಯದಲ್ಲಿ 40 ದಿನಗಳ ಕಾಲ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿತ್ತು. ಬಳಿಕ ಎಣ್ಣೆ ಮಾರಾಟಕ್ಕೆ ಅವಕಾಶವನ್ನು ನೀಡಲಾಯ್ತು. ಎಣ್ಣೆ ಅಂಗಡಿಗಳು ಓಪನ್ ಆಗುತ್ತಿದ್ದಂತೆ ಜನ ಕಿಲೋಮೀಟರ್ ಗಟ್ಟಲೆ ಸಾಲು ನಿಂತು ಮದ್ಯ ಖರೀದಿಸಿದರು. ಇದನ್ನು ನೋಡಿದ ಸರ್ಕಾರ ಮದ್ಯ ಮಾರಾಟದಿಂದ ಉತ್ತಮ ಆದಾಯ ಬರುತ್ತೆ ಎಂದು ನಂಬಿಕೊಂಡಿತ್ತು. ಆದರೆ ಈಗ ಅಬಕಾರಿ ಇಲಾಖೆ ದಾಖಲೆ ಬಿಡುಗಡೆ ಮಾಡಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ 1 ಸಾವಿರ ಕೋಟಿಗೂ ಅಧಿಕ ನಷ್ಟ ಉಂಟಾಗಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಎಣ್ಣೆ ವ್ಯಾಪಾರ ಬರೊಬ್ಬರಿ 33.88 ಶೇಕಡಾದಷ್ಟು ಕಡಿಮೆಯಾಗಿದೆ. ಇದರಿಂದ ಸರ್ಕಾರದ ಖಜಾನೆಗೆ ಹರಿದು ಬರುತ್ತಿದ್ದ ಆದಾಯ ಅರ್ಧಕ್ಕಿಳಿದಿದೆ. 2019ರ ಜೂನ್ ವರೆಗೆ 152.38 ಲಕ್ಷ ಲೀಟರ್ ಮದ್ಯ ಮಾರಾಟವಾಗಿತ್ತು.. ಆದ್ರೆ ಈ ವರ್ಷದ ಜೂನ್ ವರೆಗೆ 100.76 ಲಕ್ಷ ಲೀಟರ್ ಮದ್ಯ ಮಾರಾಟವಾಗಿದೆ.. ಅಂದರೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ 51.62 ಲಕ್ಷ ಲೀಟರ್ ಕಡಿಮೆಯಾಗಿದೆ.
ಮದ್ಯದಿಂದ ಹರಿದು ಬಂದ ಆದಾಯ:
ಇನ್ನು 2019ರ ಜನವರಿಯಿಂದ ಜೂನ್ ವರೆಗೆ ನಡೆದ ಮದ್ಯ ಮಾರಾಟದಿಂದ ಸರ್ಕಾರಕ್ಕೆ ಬರೊಬ್ಬರಿ 5,760.14 ಕೋಟಿ ರೂಪಾಯಿ ಆದಾಯ ಹರಿದು ಬಂದಿತ್ತು. ಆದರೆ ಈ ವರ್ಷ ಜನವರಿಯಿಂದ ಜೂನ್ ವರೆಗೆ ಕೇವಲ 3,846 ಕೋಟಿ ಮಾತ್ರ ಆದಾಯ ಬಂದಿದೆ. ಇನ್ನು ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಸರ್ಕಾರಕ್ಕೆ 1,913.38 ಕೋಟಿ ಆದಾಯ ಕಡಿಮೆಯಾಗಿದೆ.