ದೆಹಲಿ: ಕೊರೋನಾದ ನಡುವೆ ಸರ್ಕಾರ ಜನ ಸಾಮಾನ್ಯರಿಗೆ ದೊಡ್ಡ ಶಾಕ್ ನೀಡಿದೆ. ಕೇಂದ್ರ ಸರ್ಕಾರ ಮತ್ತೊಮ್ಮೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಿದೆ.. 14.2 ಕೆಜಿ ಅಡುಗೆ ಅನಿಲ ಬೆಲೆ 50 ರೂಪಾಯಿ ಏರಿಕೆ ಮಾಡಿದೆ. ಈ ಮೂಲಕ 15 ದಿನಗಳಲ್ಲಿ ಎರಡನೇ ಬಾರಿಗೆ ಅನಿಲ ದರವನ್ನು ಏರಿಕೆ ಮಾಡಿ ಜನ ಸಾಮಾನ್ಯರಿಗೆ ಬರೆ ಹಾಕಿದೆ.
ಅಡುಗೆ ಅನಿಲ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 50 ರೂಪಾಯಿ ಏರಿಕೆ ಮಾಡಿದ್ದು, ಇದರ ಜೊತೆಗೆ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 36 ರೂ.ಗೆ ಏರಿಕೆಯಾಗಿದೆ. ಇಂದಿನಿಂದ ಹೊಸ ದರಗಳು ಜಾರಿಗೆ ಬಂದಿವೆ. ಈ ಹಿಂದೆ ಡಿಸೆಂಬರ್ 3ರಂದು ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರೂ.ಗೆ ಏರಿಸಿತ್ತು.
ಇಂಡಿಯನ್ ಆಯಿಲ್ ವೆಬ್ ಸೈಟ್ ಪ್ರಕಾರ, ದೆಹಲಿಯಲ್ಲಿ 14.2 ಕೆಜಿ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 694 ರೂ.ಗೆ ಏರಿಕೆಯಾಗಿದೆ. ಈ ಮೊದಲು ಪ್ರತಿ ಸಿಲಿಂಡರ್ ಬೆಲೆ 644 ರೂ. ದಾಖಲಾಗಿತ್ತು. ಕೋಲ್ಕತ್ತಾದಲ್ಲಿ 720.50 ರೂ., ಮುಂಬೈನಲ್ಲಿ 694 ರೂ., ಚೆನ್ನೈನಲ್ಲಿ 710 ರೂ.ಗೆ ಏರಿಕೆಯಾಗಿದೆ.