ಬೆಂಗಳೂರು- ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರುವುದಕ್ಕಾಗಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಈಗಾಗ್ಲೇ ಮುಂದಡಿಯಿಟ್ಟಿದೆ. ಕಾಂಗ್ರೆಸ್ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತದೆ, ಬೀದಿ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಮುಂದಾಗಬಹುದು ಅನ್ನುವ ಲೆಕ್ಕಾಚಾರ ಇದ್ದರೂ ಕರ್ನಾಟಕ ಸರ್ಕಾರ ಧೈರ್ಯದಿಂದಲೇ ಗೋ ಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲು ಮುಂದಾಗಿದೆ.
ಕರ್ನಾಟಕ ಸರ್ಕಾರ ಮಾಡೇ ಬಿಡುತ್ತಾ ಹೊಸ ಕಾನೂನು?
ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ಬಂದೇ ಬರುತ್ತೆ. ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡಿಸುತ್ತೇವೆಂದು ರಾಜ್ಯ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಹೇಳಿದ ನಂತರ ಈ ಕಾನೂನು ಜಾರಿಯ ಕುರಿತಾಗಿ ಚರ್ಚೆಗಳು ಆರಂಭವಾಗಿದೆ.
ಮುಂದಿನ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗುವ ನಿರೀಕ್ಷೆಯೂ ಇದೆ. ಆದರೆ ರಾಜ್ಯ ಸರ್ಕಾರ ಈ ಕಾನೂನು ಜಾರಿಗೊಳಿಸಲು ಬಹುದೊಡ್ಡ ಧೈರ್ಯ ಮಾಡಬೇಕಾಗುತ್ತದೆ. ಗೋ ಹತ್ಯೆ ನಿಷೇಧ ಕಾನೂನು ಜಾರಿಯಾದ ಬೆನ್ನಲ್ಲೇ ರಾಜ್ಯದಾದ್ಯಂತ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ. ಈ ಎಲ್ಲಾ ಲೆಕ್ಕಾಚಾರಗಳ ನಂತರವೂ, ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಕಾಂಗ್ರೆಸ್ ನವರ ವಿರೋಧದ ನಡುವೆಯೂ ಈ ಕಾನೂನು ಜಾರಿಗೊಳಿಸುವುದಾಗಿ ಹೇಳಿರುವುದರಿಂದ, ಇದಕ್ಕಾಗಿ ಒತ್ತಾಯಿಸಿದವರೆಲ್ಲರೂ ಕೂಡ ಬಹು ನಿರೀಕ್ಷೆಯಲ್ಲಿದ್ದಾರೆ.
ಗುಜರಾತ್ ಮಾದರಿಯಲ್ಲಿ ಆಗುತ್ತಾ ಕಾನೂನು?
ಗುಜರಾತಿನಲ್ಲಿ ಗೋ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಿದೆ. ಗರಿಷ್ಠ ಜೀವಾವದಿಯವರೆಗೂ ಶಿಕ್ಷೆ ನೀಡುವಂತಹ ಕಾನೂನು ಗುಜರಾತಿನಲ್ಲಿದೆ. ಆದರೆ ಗೋ ಹತ್ಯೆ ಮಾಡಿದವರಿಗೆ 10 ವರ್ಷ ಜೈಲು ಖಚಿತವಾಗುತ್ತೆ. ಜೊತೆಗೆ ಒಂದು ಲಕ್ಷರೂಪಾಯಿ ದಂಡವನ್ನು ಗುಜರಾತ್ ನಲ್ಲಿ ವಿಧಿಸುತ್ತಾರೆ. ದಂಡದ ಮೊತ್ತವನ್ನು ಗರಿಷ್ಠ ಐದು ಲಕ್ಷಕ್ಕೂ ಏರಿಕೆಗೊಳಿಸುವ ಅವಕಾಶಗಳಿವೆ.

ಕರ್ನಾಟಕದಲ್ಲಿ ಇಷ್ಟೋಂದು ಕಠಿಣ ಶಿಕ್ಷೆ ನೀಡಲಾಗುತ್ತಾ? ರಾಜ್ಯ ಸರ್ಕಾರ ಚುನಾವಣೆಯ ವೇಳೆ ಕೊಟ್ಟಿರುವ ಮಾತು ಉಳಿಸಿಕೊಳ್ಳುತ್ತಾ? ಈ ವೇಳೆ ಕಾಂಗ್ರೆಸ್ ವಿರೋಧವನ್ನು ಹೇಗೆ ಎದುರಿಸುತ್ತೆ ?ಈ ರೀತಿಯ ಎಲ್ಲಾ ಪ್ರಶ್ನೆಗಳಿಗೂ ಸಧ್ಯದಲ್ಲೇ ಉತ್ತರ ಸಿಗುವ ಸಾಧ್ಯತೆಯಿದೆ.