ಬೆಂಗಳೂರು: ಕರೊನಾ ಕಾರ್ಖಾನೆ ಚೀನಾದ ಮೇಲೆ ಕರ್ನಾಟಕ ಸರ್ಕಾರವೂ ಕೆಂಡಕಾರುತ್ತಿದೆ. ರಾಜ್ಯದಲ್ಲೂ ದಿನದಿಂದ ದಿನಕ್ಕೆ ಕರೊನಾ ಹೆಚ್ಚುತ್ತಿದೆ. ಇದರಿಂದಾಗಿ ಚೀನಾದ ರೇಷ್ಮೆಯನ್ನು ಆಮದು ಮಾಡಿಕೊಳ್ಳದಂತೆ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ ಎಂದು ತೋಟಗಾರಿಕೆ ಸಚಿವ ನಾರಾಯಣಗೌಡ ಹೇಳಿದ್ದಾರೆ.
ರೇಷ್ಮೆ ಬೆಳೆಗಾರರ ಸಂಕಷ್ಟಗಳ ಕುರಿತಾಗಿ ತೋಟಗಾರಿಕೆ ಸಚಿವ ನಾರಾಯಣಗೌಡ, ರೈತ ಸಂಘದ ಮುಖ್ಯಸ್ಥರು, ರೈತ ಮುಖಂಡರ ಜೊತೆ ಸಭೆ ನಡೆಸಿದ್ರು. ಈ ಸಭೆಯಲ್ಲಿ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ರೇಷ್ಮೆ ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವ ಕುರಿತು ಸಿಎಂ ಜೊತೆ ಚರ್ಚಿಸುವುದಾಗಿ ಸಚಿವ ನಾರಾಯಣಗೌಡ ಭರವಸೆ ನೀಡಿದ್ದಾರೆ.
ಚೀನಾದ ರೇಷ್ಮೆ ಆಮದಿನಿಂದ ರಾಜ್ಯದ ರೇಷ್ಮೆಯ ಬೆಲೆ ಕಡಿಮೆಯಾಗಬಹುದು. ಹೀಗಾಗಿ ಆ್ಯಂಟಿ ಡಂಪಿಂಗ್ ಟ್ಯಾಕ್ಸನ್ನೂ ಹೆಚ್ಚಿಸಿ, ಚೀನಾ ರೇಷ್ಮೆ ಆಮದನ್ನು ನಿಲ್ಲಿಸಿ ಎಂದು ಸಚಿವರಿಗೆ ರೈತ ಮುಖಂಡರು ಮನವಿ ಮಾಡಿದರು.ಈ ವೇಳೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.