ನವದೆಹಲಿ : ಗಡಿಯಲ್ಲಿ ಕ್ಯಾತೆ ತೆಗೆದು ಭಾರತವನ್ನ ಕೆಣಕಿರೋ ಚೀನಾಗೆ ಮೇಲಿಂದ ಮೇಲೆ ಆಘಾತ ನೀಡಲು ಭಾರತ ಇನ್ನಿಲ್ಲದ ಕಸರತ್ತು ನಡೆಸಿದೆ. ಈಗಾಗಲೇ ಚೀನಾದ 59 ಆ್ಯಪ್ ಗಳನ್ನು ಭಾರತ ಬ್ಯಾನ್ ಮಾಡಿ ದೊಡ್ಡ ಹೊಡೆತವನ್ನೇ ನೀಡಿದೆ. ಮೋದಿ ಸರ್ಕಾರ ಕೊಟ್ಟ ಈ ಶಾಕ್ ನಿಂದ ಹೊರ ಬರುವ ಮುನ್ನವೇ ಇನ್ನೊಂದು ದೊಡ್ಡ ಪೆಟ್ಟು ನೀಡೋಕೆ ಭಾರತ ಸಜ್ಜಾಗಿದೆ.

ಸದ್ಯ ಭಾರತ ಮತ್ತು ಚೀನಾ ನಡುವೆ ಅಪಾರ ಪ್ರಮಾಣದ ವ್ಯಾಪಾರ ವ್ಯವಹಾರ ನಡೆಯುತ್ತಿದೆ. ಆದ್ರೆ ಭಾರತ ರಫ್ತಿನ ಕೊರತೆ ಎದುರಿಸುತ್ತಿದೆ. ಅಂದರೆ ಭಾರಕ್ಕೆ ಚೀನಾ ವಸ್ತುಗಳು ಹೆಚ್ಚು ರಫ್ತಾಗುತ್ತಿದ್ದು ಭಾರತದಿಂದ ಚೀನಾಗೆ ಆಮದು ಆಗುತ್ತಿರೋ ವಸ್ತುಗಳ ಪ್ರಮಾಣ ಬಹಳ ಕಡಿಮೆ ಇದೆ. ಈ ಹಿಂದೆ ಚೀನಾ ಭಾರತ ನಡುವೆ ಸ್ನೇಹ ಸಂಬಂಧ ಇದ್ದ ಕಾರಣ ಇದನ್ನ ಸರಿಪಡಿಸೋದು ಕೇಂದ್ರಕ್ಕೆ ಬಹಳ ಕಷ್ಟದಾಯಕವಾಗಿತ್ತು. ಆದ್ರೆ ಈಗ ಗಡಿ ಕ್ಯಾತೆಯಿಂದಾಗಿ ಭಾರತ ಹಾಗೂ ಡ್ರ್ಯಾಗನ್ ರಾಷ್ಟ್ರದ ಸಂಬಂಧ ಹಳಸಿಹೋಗಿದೆ. ಹೀಗಾಗಿ ಚೀನಾಗೆ ಪಾಠ ಕಲಿಸಲು ಇದೇ ಸಮಯ ಎಂದು ಅರಿತಿರೋ ಮೋದಿ ಸರ್ಕಾರ ಮೇಲಿಂದ ಮೇಲೆ ಚೀನಾ ವಿರುದ್ಧ ತಂತ್ರಗಾರಿಕೆ ಮಾಡ್ತಿದ್ದಾರೆ.

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಸಿದ್ಧತೆಯಲ್ಲಿ ಮೋದಿ
ಸದ್ಯ ಭಾರತಕ್ಕೆ ಚೀನಾದಿಂದ ಆಮದು ಆಗ್ತಿರೋ ವಸ್ತುಗಳಿಗೆ ಕಡಿವಾಣ ಹಾಕುವುದು ಜೊತೆಗೆ ಭಾರತದಲ್ಲಿ ತಯಾರಾಗುವ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಸಿಗುವಂತೆ ನೋಡಿಕೊಳ್ಳುವುದು ಇದು ಕೇಂದ್ರ ಸರ್ಕಾರದ ಲೆಕ್ಕಾಚಾರವಾಗಿದೆ. ಇದಕ್ಕಾಗಿ ಚೀನಾದಿಂದ ಆಮದಾಗ್ತಿರೋ ವಸ್ತುಗಳ ಮೇಲೆ ಅಪಾರ ಪ್ರಮಾಣದ ಆಮದು ತೆರಿಗೆಯನ್ನ ವಿಧಿಸೋಕೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದ್ರಿಂದ ಚೀನಾ ವಸ್ತುಗಳ ಬೆಲೆ ವಿಪರೀತ ಏರಿಕೆ ಕಾಣಲಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಭಾರತದಲ್ಲಿ ತಯಾರಾದ ವಸ್ತುಗಳು ಚೀನಾ ವಸ್ತುಗಳಿಗಿಂತ ಕಡಿಮೆ ಬೆಲೆಯಲ್ಲಿ ಸಿಗಲಿದೆ. ಜನ ಸಹಜವಾಗೇ ಭಾರತದ ವಸ್ತುಗಳನ್ನೇ ಕೊಳ್ಳಲು ಮುಂದಾಗ್ತಾರೆ. ಇದರಿಂದ ಚೀನಾ ವಸ್ತುಗಳ ನಿಯಂತ್ರಣ ಜೊತೆಗೆ ರಫ್ತು ಕೊರತೆಯನ್ನ ಸರಿದೂಗಿಸುವುದು ಜೊತೆಗೆ ಭಾರತದಲ್ಲಿ ತಯಾರಾದ ವಸ್ತುಗಳಿಗೆ ಮಾರುಕಟ್ಟೆ ಒದಗಿಸೋದು. ಈ ಎರಡನ್ನೂ ಒಂದೇ ಅಸ್ತ್ರದಿಂದ ಮಾಡಿ ಮುಗಿಸಲು ಪ್ರಧಾನಿ ಮೋದಿ ಸಜ್ಜಾಗಿದ್ದಾರೆ.

ಈಗಾಗಲೇ ಈಬಗ್ಗೆ ತಜ್ಞರಿಂದ ಮಾಹಿತಿಯನ್ನ ಪಡೆದಿದ್ದು, ಚೀನಾದ ಯಾವ ಯಾವ ವಸ್ತುಗಳ ಮೇಲೆ ತೆರಿಗೆ ವಿಧಿಸಬಹುದು ? ಹಾಗೆ ಆ ವಸ್ತುಗಳ ಬದಲಿಗೆ ಭಾರತದಲ್ಲಿ ಯಾವ ವಸ್ತುಗಳಿದೆ ? ಈ ಎಲ್ಲಾ ಮಾಹಿತಿಗಳನ್ನ ತಜ್ಞರಿಂದ ಕೇಂದ್ರ ಸರ್ಕಾರ ಪಡೆದುಕೊಂಡಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಇನ್ನೊಂದು ತಿಂಗಳಲ್ಲೇ ಚೀನಾಗೆ ಗ್ಯಾರೆಂಟಿ ಮತ್ತೊಂದು ಆಘಾತ ಆಗಲಿದೆ.