ಬೆಂಗಳೂರು-ನರೇಂದ್ರ ದಾಮೋದರ ದಾಸ್ ಮೋದಿ. ಭಾರತದ ಪ್ರಧಾನಮಂತ್ರಿ. ವಿಶ್ವದ ಅಗ್ರಗಣ್ಯ ನಾಯಕರಲ್ಲಿ ಒಬ್ಬರು. 2014ರ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ನಂತರ, 2019ರಲ್ಲಿ ಮತ್ತದೇ ಫಾರ್ಮ್ ನಲ್ಲೇ ಬ್ಯಾಟಿಂಗ್ ಮಾಡಿ ಗೆದ್ದು ಬೀಗಿದ ಸರದಾರ. ಭಾರತದ ಅಭಿವೃದ್ಧಿಯ ಕನಸು ಕಂಡು ಆ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಿರುವ ದೇಶದ ದೊರೆಗೆ ಇಂದು 70ನೇ ಜನುಮದಿನದ ಸಂಭ್ರಮ.ರಾಷ್ಟ್ರದಾದ್ಯಂತ ಮೋದಿಜೀಯವರ ಜನುಮದಿನವನ್ನು ವಿಭಿನ್ನವಾಗಿ ವಿಶಿಷ್ಟವಾಗಿ ಆಚರಿಸುತ್ತಾರೆ.
ಮೋದಿಯವರ ಜನನ ಮತ್ತು ಬಾಲ್ಯ
ನರೇಂದ್ರ ದಾಮೋದರ ದಾಸ್ ಮೋದಿ ಸಪ್ಟೆಂಬರ್ 17 1950ರಂದು ಗುಜರಾತಿನ ವಡಾನಗರದಲ್ಲಿ ಜನಿಸಿದರು. ದಾಮೋದರ ದಾಸ್ ಮೋದಿ ಮತ್ತು ಹೀರಾಬೇನ್ ರ ಆರು ಮಕ್ಕಳಲ್ಲಿ ಮೂರನೇಯವರಾಗಿ ಮೋದಿ ಜನಿಸಿದರು. ಬಡ ಕುಟುಂಬದಲ್ಲಿ ಜನಿಸಿದ ಮೋದಿ ತಂದೆ ಸಹಾಯ ಮಾಡುತ್ತಾ ಬೆಳೆಯುತ್ತಿದ್ದರು. ಎಂಟನೇ ವರ್ಷವಾದಾಗ ಆರ್ ಎಸ್ ಎಸ್ ನತ್ತ ಆಕರ್ಷಿತನಾದರು. ಇಲ್ಲಿಂದ ಮುಂದೆ ನರೇಂದ್ರ ಮೋದಿಯವರ ಹೊಸ ಜೀವನ ಆರಂಭವಾಯ್ತು.
ಹೀಗೆ ವರುಷಗಳು ಕಳೆದಂತೆ ನರೇಂದ್ರ ಮೋದಿ ಹೋರಾಟಗಾರನಾದರು. ದೇಶಕ್ಕೆ ತುರ್ತು ಪರಿಸ್ಥಿತಿ ಒದಗಿ ಬಂದಾಗ ಪ್ಪತಿಭಟನೆಯಲ್ಲಿ ಭಾಗಿಯಾಗಿ ಜೈಲುಪಾಲಾದರು. 1987ರಲ್ಲಿ ಬಿಜೆಪಿಗೆ ಸೇರಿ ಗುಜರಾತಿನಲ್ಲಿ ಬಿಜೆಪಿ ಪಕ್ಷದ ಬಲವರ್ಧನೆಗೆ ಟೊಂಕ ಕಟ್ಟಿ ನಿಂತರು. 2001ರಂದು ಮೊದಲ ಬಾರಿಗೆ ಗುಜರಾತಿನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನರೇಂದ್ರ ಮೋದಿ ನಂತರ ರಾಜಕೀಯದಲ್ಲಿ ಇಟ್ಟಿದ್ದೆ ಹುಲಿ ಹೆಜ್ಜೆ.
ಅಭಿವೃದ್ಧಿಯ ಯೋಜನೆಗಳಿಂದ ಗುಜರಾತಿನ ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡಿದ್ದ ಮೋದಿ 2014ರಲ್ಲಿ ರಾಷ್ಟ್ರ ರಾಜಕಾರಣಕ್ಕೆ ಧುಮುಕಿದ್ದರು. ಕಾಂಗ್ರೆಸ್ ಪಕ್ಷದ ಜನಪ್ರಿಯತೆಯ ಮೋದಿ ಪ್ರವೇಶವಾಗುತ್ತಲೇ ಕಡಿಮೆಯಾಗುತ್ತಾ ಸಾಗಿತು. ಭಾರತದಾದ್ಯಂತ ನರೇಂದ್ರ ಮೋದಿಯ ಅಲೆಯೇ ನಿರ್ಮಾಣವಾಯ್ತು. ನಂತರ ಅಭೂತಪೂರ್ವ ಗೆಲುವು ಕಂಡು ದೇಶದ ಪ್ರಧಾನಿಯೂ ಆದರು. ಈಗ ಎರಡನೇ ಬಾರಿಗೆ ಪ್ರಧಾನಿಯಾಗಿದ್ದಾರೆ.
ದೇಶದ ಜನರು ಅಚ್ಚರಿಪಡುವಂತಹ, ದೇಶದ ಬಹುತೇಕರು ಮೆಚ್ಚುವಂತಹ, ಹಲವರು ಬೀದಿಗಿಳಿದು ಹೋರಾಟ ಮಾಡುವಂತಹ, ರೈತರು ಖುಷಿ ಪಡುವಂತಹ, ವಿರೋಧಿಗಳು ಆಕ್ರೋಶ ವ್ಯಕ್ತಪಡಿಸುವಂತಹ ಹಲವು ಯೋಜನೆಗಳನ್ನು ಧೈರ್ಯದಿಂದಲೇ ಮಾಡಿ ಮುಗಿಸಿದ್ದಾರೆ. ಇಂತಹ ಅಪ್ರತಿಮ ನಾಯಕನಿಗೆ ಇಂದು ಜನುಮದಿನದ ಸಂಭ್ರಮ, ಇವರಿಗೆ ಯಾರೆಲ್ಲ ಶುಭಾಶಯ ಕೋರಿದ್ದಾರೆ ಅನ್ನುವುದು ಈ ಕೆಳಗಿನಂತಿವೆ.






