ಬಾರ್ಕೂರು-ಅಲ್ಲಿ ಯುವತಿಯೊಬ್ಬಳು ಉಸಿರು ಚೆಲ್ಲುವ ಕೊನೆಯ ಕ್ಷಣದಲ್ಲಿದ್ದಂತೆ ಮಲಗಿದ್ದಳು..ಕೆರೆಗೆ ಬಿದ್ದ ಕಾರಿನಲ್ಲಿ ಇದ್ದ ಮಾಲೀಕ ಪ್ರಾಣಪಕ್ಷಿ ಹಾರಿ ಹೋಗಿತ್ತು. ಅಲ್ಲಿದ್ದವರು, ಅದರೊಳಗಿದ್ದ ಯುವತಿಯನ್ನು ಕೆರೆಯಿಂದ ಮೇಲೆತ್ತಿದ್ದರು, ಆದರೆ ಯುವತಿಯ ದೇಹ ನಿಶ್ಚಲವಾಗಿತ್ತು. ಸುತ್ತ ಮುತ್ತ ಜನರ ಸಂಖ್ಯೆಯೂ ಹೆಚ್ಚಾಗಿತ್ತು. ಆಂಬ್ಯುಲೆನ್ಸ್, ರಿಕ್ಷಾ ಅದೂ ಇದೂ ಅಂತ ಯುವತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಎಲ್ಲರೂ ಬೊಬ್ಬೆ ಹಾಕುತ್ತಿದ್ದರು.

ನಿಶ್ಚಲವಾಗಿ ಮಲಗಿರುವ ಯುವತಿಗೆ ಮಾಡಬೇಕಾಗಿದ್ದ ಪ್ರಥಮ ಚಿಕಿತ್ಸೆಯನ್ನು ಆ ಬಾಲಕಿ ಮಾಡುತ್ತಲೇ ಇದ್ದಳು. ತನ್ನ ಎರಡೂ ಕೈಗಳನ್ನು ನೀರಿನಿಂದ ರಕ್ಷಣೆ ಮಾಡಿರುವ ಯುವತಿಯ ಎದೆಯ ಮೇಲಿಟ್ಟು, ಒತ್ತುತ್ತಲೇ ಇದ್ದಳು. ಬಾಲಕಿಯ ಮುಖದಲ್ಲೊಂದು ಆತ್ಮವಿಶ್ವಾಸವಿತ್ತು. ಕ್ಷಣ ಕೂಡ ಪೋಲಾಗದಂತೆ ಕೈ ತಿಕ್ಕುತ್ತಿದ್ದಳು, ಕಾಲಿನ ಅಡಿಯನ್ನೂ ಕೂಡ ಬಿಸಿ ಮಾಡುತ್ತಿದ್ದಳು.

ನೀರು ಕುಡಿದ ಯುವತಿ ಕೊಂಚ ನೀರು ಕಕ್ಕಿದರೆ ಸಾಕು, ಜೀವ ಉಳಿಸಬಹುದು ಅಂತ ಬಾಲಕಿ ಅಂದುಕೊಂಡಿದ್ದಳು. ಅದರಂತೆ ನಿಶ್ಚಲವಾಗಿದ್ದ ಯುವತಿಯಿಂದ ಬಾಯಿಯಿಂದ ನೀರು ಕಕ್ಕುವಂತೆ ಈ ನಮನ ಮಾಡಿಯೇ ಬಿಟ್ಟಳು. ಚೌಳಿಕೆರೆಗೆ ಕಾರು ಬಿದ್ದಾಗ ಯುವತಿಯ ರಕ್ಷಣೆಗೆ ಧಾವಿಸಿದವಳೇ ಈ ನಮನ. ಲಿಟಲ್ ರಾಕ್ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತೆ ಮತ್ತು ಚುರುಕಿನ ವಿದ್ಯಾರ್ಥಿನಿ.

ಹತ್ತನೇ ತರಗತಿಯ ಬಾಲಕಿಯರು ಇಂತಹ ಘಟನೆಗಳಾದಾಗ ಬೆಚ್ಚಿಬಿದ್ದು ಕಣ್ಣೀರು ಹಾಕುತ್ತಾರೆ, ಭಯಗೊಂಡು ದೂರ ಓಡಿ ಹೋಗುತ್ತಾರೆ, ಆದರೆ ಕೆಲವೇ ಕೆಲವರು ಮುಂದೆ ಬಂದು ಧೈರ್ಯದಿಂದ ಬಾಲಕಿಯ ರಕ್ಷಣೆಗೆ ಧಾವಿಸುತ್ತಾರೆ. ಹೀಗೆ ಚೌಳಿಕೆರೆಯಲ್ಲಿ ಧಾವಿಸಿ ಬಂದಿದ್ದು ನಮನ. ಉಪನ್ಯಾಸಕಿಯ ಮಗಳಾದ ನಮನ ಯುವತಿಯ ಉಸಿರಾಟಕ್ಕೆ ತೊಂದರೆಯಾಗಿದ್ದ ನೀರನ್ನು ತೆಗೆದು ಜೀವ ಉಳಿಸಿದ್ದಾರೆ. ಬಳಿಕ ಯುವತಿಯನ್ನು ಆಸ್ರತ್ರೆಗೆ ಸಾಗಿಸಲಾಗಿದ್ದು, ಈಗ ಆ ಯುವತಿ ಚೇತರಿಸಿಕೊಳ್ಳುತ್ತಿದ್ದಾಳೆ. ಆಸ್ಪತ್ರೆಯ ವೈದ್ಯರು ಕೂಡ ಸಮಯೋಚಿತವಾಗಿ ಯುವತಿಗೆ ನೆರವಾದ ನಮನಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಬ್ಜಿ ಗೇಮ್ ನಲ್ಲಿರುವುದು ಗೆಲುವಲ್ಲ..!
ನಮನ ಮಾಡಿದ ಮಹಾನ್ ಕಾರ್ಯವೇ ಗೆಲುವು..!
ಜೀವ ಉಳಿಸಿ ಮನ ಗೆದ್ದು ಬಿಟ್ಟಳು ನಮನ..!
ನಮನ ಯುವತಿಯ ಜೀವ ಉಳಿಸಿರುವುದಕ್ಕೆ ಎಲ್ಲೆಡೆಯಿಂದಲೂ ಪ್ರಶಂಸೆಗಳು ಬರುತ್ತಿವೆ. ಇದು ನಮ್ಮ ಯುವಜನತೆಗೆ ಸ್ಫೂರ್ತಿಯಾಗಬೇಕು. ಪೆಟ್ಟು, ಗಲಾಟೆ, ಮೊಬೈಲ್, ಗೇಮ್ಸ್, ಫೇಸ್ ಬುಕ್,ವಾಟ್ಸಾಪ್ ಗಳಷ್ಟೇ ಬದುಕಲ್ಲ ಅಂತ ಬಹುತೇಕರು ಅರಿತುಕೊಳ್ಳಬೇಕಿದೆ. ನಮನ ಮಾಡಿರುವ ಈ ಮಹಾನ್ ಕಾರ್ಯ ನಮ್ಮ ಯಂಗಿಸ್ತಾನಕ್ಕೆ ಸ್ಫೂರ್ತಿಯಾಗಲಿ.