ತುಳಸಿ ಗಿಡ ಎಂದ ತಕ್ಷಣ ನಮಗೆ ಹಲವಾರು ಪ್ರಶ್ನೆಗಳು ಮೂಡುತ್ತವೆ.. ತುಳಸಿ ಗಿಡವನ್ನು ಮನೆಯ ಮುಂದೆ ಬೆಳೆಸುವುದು ಏಕೆ? ಅದನ್ನು ಪೂಜಿಸುವುದೇಕೆ? ಅದರ ವಾಸನೆಯನ್ನ ಆಘ್ರಾಣಿಸುವುದೇಕೆ? ಅದರ ತೀರ್ಥ ಸೇವನೆ ಯಾಕೆ? ಈ ಪ್ರಶ್ನೆಗಳಿಗೆ ನಮ್ಮ ಪೂರ್ವಜರು ಅನೇಕ ಕಥೆಗಳ ಮೂಲಕ ಅದರ ಮಹತ್ವವನ್ನ ತಿಳಿಸಿದ್ದಾರೆ. ಆದರೆ, ಅದರ ಔಷಧಿಯ ಗುಣಗಳನ್ನ ಇಲ್ಲಿ ತಿಳಿದುಕೊಳ್ಳೋಣ.
ತುಳಸಿ ಗಿಡದ ಮೇಲೆ ಬೀಸುವ ಗಾಳಿಯ ಸೇವನೆಯಿಂದ ಶ್ವಾಸಕೋಷದ ಸೋಂಕು ನಿವಾರಣೆ ಆಗುತ್ತದೆ. ತುಳಸಿ ದಳವನ್ನ ನೀರಿಗೆ ಹಾಕಿ ಸೇವಿಸುವುದರಿಂದ ಗಂಟಲಿನ ರೋಗಗಳಿಗೆ ಒಳ್ಳೆಯದು.
ತುಳಸಿಯ ಔಷಧೀಯ ಗುಣಗಳು:
- ತುಳಸಿಯು ಅಗ್ನಿ ದೀಪಕ, ರುಚಿಕಾರಕ ಗುಣವುಳ್ಳದ್ದು. ಇದು ವಾತಾಹರ ಹಾಗೂ ವಿಷಹರವಾಗಿ ವರ್ತಿಸುವುದು
- ತುಳಸಿ ಎಲೆ ಸೇವಿಸುವುದರಿಂದ ಬಾಯಿಯಲ್ಲಿರುವ ಕಲ್ಮಶ ನಿವಾರಣೆಯಾಗಿ ಬಾಯಿಯ ದುರ್ಗಂಧ ನಿವಾರಣೆಯಾಗುವುದು.
- ತುಳಸಿ ಸೊಪ್ಪಿನ ಕಷಾಯ ಮಾಡಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವಿಗೆ, ಬಾಯಿ ಹಾಗೂ ದಂತಗಳ ರಕ್ಷಣೆಗೆ ರಾಮ ಬಾಣವಾಗಲಿದೆ.
- ಏಳರಿಂದ ಎಂಟು ತುಳಸಿ ಎಲೆಗಳನ್ನ ಅಗಿದು ತಿನ್ನುವುದರಿಂದ ಬಾಯಿ ಹುಣ್ಣು ನಿವಾರಣೆಯಾಗಲಿದೆ.
- ತುಳಸಿಯನ್ನು ದಿನನಿತ್ಯ ಸೇವಿಸುತ್ತಿದ್ದರೆ ಜೊಲ್ಲು ಸುರಿಯುವುದು , ಕಫ ಕಟ್ಟುವುದು ನಿವಾರಣೆಯಾಗುತ್ತದೆ.
- ಒಂದು ಹಿಡಿ ತುಳಸಿ ಹಾಗೂ ನಾಲ್ಕು ಲವಂಗ ಸೇರಿಸಿ ಜಜ್ಜಿ ರಸವನ್ನು ಜೇನಿನೊಡನೆ ಮೂರು ದಿನಗಳ ಕಾಲ ಸತತ ಸೇವಿಸುವುದರಿಂದ ಕೆಮ್ಮು ಗುಣವಾಗುತ್ತದೆ.
- ಅರ್ಧ ಚಮಚ ತುಳಸಿ ರಸ ಹಾಗೂ ಜೇನು ಎರಡು ದಿನ ಎರಡು ಹೊತ್ತು ಕೊಡುವುದರಿಂದ ಮಗುವಿನ ಆರೋಗ್ಯಕ್ಕೆ ಒಳ್ಳೆಯದು.
- ತುಳಸಿಯನ್ನ ಪ್ರತಿನಿತ್ಯ ಸೇವಿಸುತ್ತಿದ್ದರೆ ನಪುಂಸಕತ್ವ ನಿವಾರಣೆಯಾಗುತ್ತದೆ.
- ಕೃಷ್ಣ ತುಳಸಿ ಸೇವನೆ ಮಾಡುವುದರಿಂದ ಪಿತ್ತ ದೋಷ ನಿವಾರಣೆಯಾಗಲಿದೆ.
- ತುಳಸಿ ರಸದಲ್ಲಿ ಏಲಕ್ಕಿಯನ್ನು ತೇದು ಗಂಧವನ್ನ ತಲೆಗೆ ಪಟ್ಟು ಹಾಕಿದರೆ ತಲೆನೋವು ನಿವಾರಣೆಯಾಗಲಿದೆ.