ನವದೆಹಲಿ: ಟೀಮ್ಇಂಡಿಯಾದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ತಮ್ಮ ಸಾಮಾಜಿಕ ಕಾಳಜಿಯ ಮೂಲಕ ಗಮನ ಸೆಳೆಯುತ್ತಾರೆ. ಈ ಬಾರಿ ಶಿಖರ್ ಧವನ್ ಗೋ ರಕ್ಷಕನಾಗಿ ಸುದ್ದಿಯಾಗಿದ್ದಾರೆ. ಅದರಲ್ಲೂ ತನ್ನ ಮಡದಿ ಹಾಗೂ ಮಗನೊಂದಿಗೆ ಕಾರಿನಲ್ಲಿ ತೆರಳಿ ಬೀದಿಯಲ್ಲಿರುವ ದನಗಳಿಗೆ ಧವನ್ ಆಹಾರವನ್ನು ನೀಡಿದ್ರು. ಬೀದಿಯಲ್ಲಿರುವ ದನ ಕರುಗಳ ಜೊತೆ ಧವನ್ ಮಗ ಜೊರಾವರ್ ಹಾಗೂ ಧವನ್ ಪ್ರೀತಿಯಿಂದ ನಡೆದುಕೊಂಡರು. ಹಸುಗಳನ್ನು ಸದಾ ಇಷ್ಟಪಡುವ ಧವನ್, ತಂದೆಯಾಗಿ ತಾನೇನು ಮಾಡುತ್ತಿದ್ದೇನೆ, ಏನು ಮಾಡಬೇಕು ಅಂತ ಸಾರಿದ್ದಾರೆ.
ಮಗನಿಗೆ ಜೀವನ ಪಾಠವನ್ನು ಮಾಡುತ್ತಿರುವ ಶಿಖರ್, ದನಗಳಿಗೆ ಆಹಾರ ನೀಡುವುದರಲ್ಲೂ ಮಗನಿಗೆ ನೀತಿಪಾಠ ಮಾಡಿದ್ದಾರೆ. ಪರೋಪಕಾರ ಇದ್ದರಷ್ಟೇ ಬದುಕು ಅನ್ನುವುದನ್ನು ಧವನ್ ಸಾರಿದ್ದಾರೆ. ಧವನ್ ಬೀದಿ ದನಗಳಿಗೆ ಆಹಾರ ನೀಡುವುದರ ಜೊತೆ ತನ್ನ ಮಗನೂ ಕೂಡ ಭವಿಷ್ಯದಲ್ಲಿ ಇಂತಹ ಕೆಲಸಗಳನ್ನು ಮಾಡಬೇಕು ಅಂತ ಬಯಸುತ್ತಾರೆ. ಅದಕ್ಕಾಗಿ ಅವರು ಸಾಮಾಜಿಕ ಜಾಲ ತಾಣಗಳಲ್ಲಿ ಬೀದಿ ದನಗಳಿಗೆ ಆಹಾರ ಕೊಡುವ ವೀಡಿಯೋ ಪೋಸ್ಟ್ ಮಾಡಿದ್ದು, ಅದರ ಜೊತೆ ಎಲ್ಲರೂ ಕೂಡ ಇಂತಹ ಕೆಲಸ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
“ತಂದೆಯಾಗಿ ಜೀವನದ ಪಾಠವನ್ನು ಮಾಡುವುದು ನನ್ನ ಕರ್ತವ್ಯ. ಅದರಲ್ಲಿ ಒಂದು ಪರೋಪಕಾರವನ್ನು ಮಾಡುವುದು. ಯಾರಿಗೆ ಅಗತ್ಯವಿರುವವರಿಗೆ ಸಹಾಯಹಸ್ತ ಚಾಚುವಂತಾಗಬೇಕು. ಹಸಿದ ಪ್ರಾಣಿಗಳಿಗೆ ಇಂತಹ ಕಠಿಣ ಸಮಯದಲ್ಲಿ ಆಹಾರ ನೀಡುವುದು ಬಹುಮುಖ್ಯವಾಗಿದೆ ಹಾಗೂ ಇಂತಹ ಪಾಠವನ್ನು ನನ್ನ ಮಗನಿಗೆ ಮಾಡಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಎಲ್ಲರೂ ಕೂಡ ತಮ್ಮ ಶಕ್ತಿಯಾನುಸಾರ ಇಂತಹ ಕಾರ್ಯಗಳನ್ನು ಮಾಡಿ ಅಂತ ಮನವಿ ಮಾಡುತ್ತೇನೆ” ಅಂತ ಧವನ್ ಬರೆದುಕೊಂಡಿದ್ದಾರೆ.
ಈ ಮೂಲಕ ಕ್ರಿಕೆಟರ್ ಶಿಖರ್ ಧವನ್ ವಿಭಿನ್ನ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೇ ತನ್ನ ಸಾಮಾಜಿಕ ಚಿಂತನೆಗಳು, ಹಸಿದವರ ಮೇಲಿನ ಕಾಳಜಿಯಿಂದ ಯುವ ಸಮುದಾಯಕ್ಕೆ ಪ್ರೇರಕ ಶಕ್ತಿಯಾಗಿದ್ದಾರೆ.