ಕೊಲ್ಕತ್ತಾ: ಭಾರತ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ ಸೌರವ್ ಗಂಗೂಲಿ ಇಂದು 48ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಸದ್ಯ ಬಿಸಿಸಿಐನ ಅಧ್ಯಕ್ಷರಾಗಿರೋ ಸೌರವ್ ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಛಾಪು ಮೂಡಿಸಿದ ದಿಗ್ಗಜ ಕ್ರಿಕೆಟಿಗ. ದಿ ಪ್ರಿನ್ಸ್ ಆಫ್ ಕೊಲ್ಕತ್ತಾ, ಮಹಾರಾಜ್, ರಾಯಲ್ ಬೆಂಗಾಲ್ ಟೈಗರ್ ಎಂದೆಲ್ಲಾ ಕರೆಸಿಕೊಳ್ಳೋ ಗಂಗೂಲಿ ಭಾರತೀಯರಿದೆ ದಾದಾ ಎಂದೇ ಚಿರಪರಿಚಿತ. ಇನ್ನು ಗಂಗೂಲಿ ತನ್ನ ಕ್ರಿಕೆಟ್ ಕೆರಿಯರ್ ನಲ್ಲಿ 113 ಟೆಸ್ಟ್ ಮ್ಯಾಚ್ ಆಡಿದ್ದು 7213 ರನ್ ಪೇರಿಸಿದ್ದಾರೆ. ಹಾಗೇ ಭಾರತದ ಪರ 311 ಏಕದಿನ ಪಂದ್ಯ ಆಡಿರೋ ದಾದಾ 11363 ರನ್ ದಾಖಲಿಸಿದ್ದಾರೆ.




ಭಾರತ ಕ್ರಿಕೆಟ್‌ನ ಕ್ರಾಂತಿಕಾರಕ ನಾಯಕ !
ಮ್ಯಾಚ್ ಫಿಕ್ಸಿಂಗ್ ಬೂತದಿಂದ ಬಳಲಿ ಬೆಂಡಾಗಿದ್ದ ಭಾರತೀಯ ಕ್ರಿಕೆಟ್ ತಂಡವನ್ನ ಮೇಲಿತ್ತಿದ ನಾಯಕ. ಸೋತು ಸುಣ್ಣವಾಗಿದ್ದ ಭಾರತ ತಂಡವನ್ನ ವಿದೇಶಿ ನೆಲದಲ್ಲೂ ಗೆಲ್ಲಿಸಿದ ಕ್ಯಾಪ್ಟನ್. ಮಾತ್ರವಲ್ಲ ವೀರೇಂದ್ರ ಸೆಹವಾಗ್, ಯುವರಾಜ್ ಸಿಂಗ್, ಹರ್ಬಜನ್ ಸಿಂಗ್, ಮೊಹ್ಮದ್ ಕೈಫ್, ಸೇರಿ ಹಲವು ಯುವ ಪ್ರತಿಭೆಗಳನ್ನ ಕ್ರಿಕೆಟ್ ನಲ್ಲಿ ಬೆಳೆಸಿದ ಇಂಡಿಯನ್ ಕ್ರಿಕೆಟ್ ಟೀಮ್‌ನ ಸಾರ್ವಕಾಲಿಕ ಶ್ರೇಷ್ಠ ನಾಯಕ ಸೌರವ್ ಗಂಗೂಲಿ. ಸದ್ಯ ಅಕ್ಟೋಬರ್ 23, 2019ರಿಂದ ಬಿಸಿಸಿಐನ 39ನೇ ಅಧ್ಯಕ್ಷರಾಗಿ ಗಂಗೂಲಿ ಕಾರ್ಯನಿರ್ವಹಿಸುತ್ತಿದ್ದಾರೆ.