ಅರ್ಜೆಂಟೀನಾ-ಹಮ್ಮು ಬಿಮ್ಮಿಲ್ಲ, ರಣಾಂಗಣಕ್ಕೆ ಇಳಿದ್ರೆ ಗೆಲುವೊಂದೇ ಧೇಯಮಂತ್ರ, ಗೋಲು ಪೋಸ್ಟ್ ನೊಳಕ್ಕೆ ಚೆಂಡನ್ನು ತಳ್ಳಿ ಸಂಭ್ರಮಿಸೋದಕ್ಕೊಂದು ಸೂತ್ರ, ಪ್ರತಿ ಸಂಭ್ರಮದಲ್ಲೂ ಆತನದ್ದು ಇದ್ದೇ ಇರುತಿತ್ತು ಪಾತ್ರ. ಕಾಲ್ಚೆಂಡಿನಾಟದಲ್ಲಿ ಕರಾಮತ್ತು ಪ್ರದರ್ಶಿಸಿದ ಕಿಂಗ್..20ನೇ ಶತಮಾನದ ಗ್ರೆಟೆಸ್ಟ್ ಫುಟ್ಭಾಲ್ ಪ್ಲೇಯರ್..ಬಾಲ್ ಪಾಸಿಂಗ್ ನಲ್ಲೂ ಸೂಪರ್ ಸ್ಟಾರ್.. ಚೆಂಡನ್ನು ಕಂಟ್ರೋಲ್ ಮಾಡೋದ್ರಲ್ಲಿ ಆತನಿಗೆ ಆತನೇ ಸಾಟಿ..ಡ್ರಿಬ್ಲಿಂಗ್ ಸ್ಕಿಲ್ ನಲ್ಲೂ ಆತನೇ ಕಿಂಗ್.ಆತನೇ ಫುಟ್ಭಾಲ್ ಲೋಕದ ದಂತಕತೆ ಅರ್ಜೆಂಟಿನಾದ ಡಿಯಾಗೋ ಮರಡೋನಾ.ಈ ಸೂಪರ್ ಸ್ಟಾರ್ ಇನ್ನು ನೆನಪು ಮಾತ್ರ ಅಂದರೆ ನಂಬಲಾಗದೇ ಇರೋ ಕಹಿಸತ್ಯ.
ಅರ್ಜೆಂಟೀನಾದ ಈ ಸೂಪರ್ ಸ್ಟಾರ್ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಅರ್ಜೆಂಟಿನಾದ ಬ್ಯೂನಸ್ ಐರಿಸ್ ನಲ್ಲಿ ಮರಡೋನಾಗೆ ನವೆಂಬರ್ 10ರಂದು ಮಿದುಳಿನ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ನವೆಂಬರ್ 12ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಆಗಿದ್ರು. ಆದರೆ, ನವೆಂಬರ್ 25ರಂದು ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಇಹಲೋಕವನ್ನು ತ್ಯಜಿಸಿದ್ದಾರೆ.
ಫುಟ್ಭಾಲ್ ರಂಗದ ಕಲರ್ ಫುಲ್ ಮ್ಯಾನ್
ಬಡತನವೇ ತುಂಬಿದ್ದ ಕುಟುಂಬದಲ್ಲಿ ಜನಿಸಿದ ಮರಡೋನಾ ಫುಟ್ಭಾಲನ್ನೇ ಉಸಿರಾಡಿದ್ರು..ಅವಮಾನಗಳನ್ನು ಎದುರಿಸಿದರೂ ಕಣ್ಣ ಮುಂದಿದ್ದ ಗುರಿ ಮತ್ತು ಛಲವನ್ನು ಬಿಟ್ಟಿರಲಿಲ್ಲ. ಡಿಯಾಗೋ ಮರಡೋನಾ 1982ರಲ್ಲಿ ಅರ್ಜೆಂಟೀನಾ ಪರ ವಿಶ್ವಕಪ್ ನಲ್ಲಿ ಆಡಿದ್ರೂ ಕೂಡ ಸ್ಟಾರ್ ಪಟ್ಟ ಅಲಂಕರಿಸಲು ಮತ್ತೆ ನಾಲ್ಕು ವರ್ಷ ಕಾಯಬೇಕಾಯ್ತು..
1986ರ ಮೆಕ್ಸಿಕೋದಲ್ಲಿ ನಡೆದ ಫುಟ್ಭಾಲ್ ವಿಶ್ವಕಪ್ ನಲ್ಲಿ ವಿಶ್ವದ ಚಿತ್ತವನ್ನು ತನ್ನತ್ತ ಸೆಳೆದ ಆಟಗಾರ ಡಿಯಾಗೋ ಮರಡೋನಾ. ಅರ್ಜೆಂಟೀನಾದ ಗೆಲುವಿನ ರೂವಾರಿಯಾಗಿ ಮೆರೆದಾಡಿದ್ರು.. ಹ್ಯಾಂಡ್ ಆಫ್ ಗಾಢ್, ಗೋಲ್ ಆಫ್ ದಿ ಸೆಂಚುರಿ ಎಂಬೆಲ್ಲ ಬಿರುದುಗಳು ಮರಡೋನಾಗೆ ಒಲಿದು ಬಂತು.
ಫೈನಲ್ ಹೋರಾಟದಲ್ಲಿ ಪಶ್ಚಿಮ ಜರ್ಮನಿಯನ್ನು 3-2 ಗೋಲುಗಳಿಂದ ಮಣಿಸಿದ ಅರ್ಜೆಂಟೀನಾ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಮರಡೋನಾ ಒಟ್ಟು ಐದು ಗೋಲು ದಾಖಲಿಸಿ ಮಿಂಚಿದ್ದರು..ಹೀಗೆ ಅರ್ಜೆಂಟೀನಾ ತಂಡಕ್ಕೆ ವಿಶ್ವ ಕಿರೀಟ ತೊಡಿಸಿದ ಮರಡೋನಾ ನಂತರ ಫುಟ್ಭಾಲ್ ನ ವೀರಾಗ್ರಣಿಯಾಗಿಯೇ ಶೈನ್ ಆದ್ರು..

25 ವರ್ಷಗಳ ಕಾಲ ಫುಟ್ಭಾಲ್ ರಂಗವನ್ನಾಳಿದ ರಾಜ
1975ರಲ್ಲಿ ಫುಟ್ಭಾಲ್ ರಂಗಕ್ಕೆ ಪದಾರ್ಪಣೆಗೈದ ಮರಡೋನಾ 2001ರವರೆಗೆ ಮಿಂಚಿದ್ರು. 80 ಮತ್ತು 90ರ ದಶಕದಲ್ಲಿ ಫುಟ್ಭಾಲ್ ಜಗತ್ತಿನ ಅತೀ ಬೇಡಿಕೆಯ ಆಟಗಾರ ಜೊತೆಗೆ ಅಷ್ಟೇ ವರ್ಣರಂಜಿತ ಪ್ಲೇಯರ್ ಎಂಬ ಹೆಗ್ಗಳಿಕೆಯನ್ನೂ ಮರಡೋನಾ ಪಡೆದಿದ್ದರು.
ಈ ಕುಳ್ಳ ಏನು ಮಾಡಿಯಾನು ಅಂತ ಹೀಗಳೆದಿದ್ದ ಫುಟ್ಭಾಲ್ ರಂಗಕ್ಕೆ ತನ್ನ ತಾಕತ್ತನೆಂದು ತೋರಿಸಿದ ಛಲದಂಕಮಲ್ಲ. 1986ರಲ್ಲಿ ವಿಶ್ವಕಪ್ ಕಿರೀಟ, 1990ರಲ್ಲಿ ವಿಶ್ವಕಪ್ ನಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದ್ರು..
ಕ್ಲಬ್ ಗಳಾದ ಬಾರ್ಸಿಲೋನಾ, ಇಟಲಿಯ ನಾಪೋಲಿ, ಸ್ಪೆನ್ ನ ಸೆವಿಲ್ಲಾ ತಂಡದ ಪರವಾಗಿ ಆಡಿ ಮಿಂಚಿದ್ದರು. ಕೇವಲ 5.5ಅಡಿ ಇದ್ದ ಈ ಮರಡೋನಾ ಫುಟ್ಭಾಲ್ ರಂಗದ ದೊರೆಯಾಗಿ ಶೈನ್ ಆದ್ರು..
ಡ್ರಗ್ಸ್ ದಾಸನಾದ ಲೆಜೆಂಡ್ ಪ್ಲೇಯರ್
ಫುಟ್ಭಾಲ್ ನಲ್ಲಿ ಮರಡೋನಾಗೆ ನೇಮು ಫೇಮು ಎಲ್ಲಾ ಸಿಕ್ತು. ಇದಾದ ಬೆನ್ನಲ್ಲೇ 1989ರಲ್ಲೇ ಮರಡೋನಾ ಮಾದಕ ವಸ್ತುಗಳ ದಾಸನಾಗಿದ್ರು. ಕೊಕೇನ್ ಸೇವನೆಯನ್ನು ಮಾಡಿ ಸಿಕ್ಕಿಹಾಕಿಕೊಂಡಿದ್ರು. 1991ರಲ್ಲಿ ಮಾದಕ ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿಹಾಕಿಕೊಂಡು 15 ತಿಂಗಳ ನಿಷೇಧ ಶಿಕ್ಷೆಗೂ ಗುರಿಯಾಗಿದ್ರು..ಇಲ್ಲಿಂದ ಮುಂದೆ ಮರಡೋನಾರ ಫುಟ್ಭಾಲ್ ಸಾಧನೆಯ ಜೊತೆಗೆ ಜೊತೆಗೆ ವಿವಾದಗಳು ಬೆನ್ನೇರಿದವು…
ಅರ್ಜೆಂಟೀನಾ ಆಟಗಾರನಾಗಿ, ಅರ್ಜೆಂಟೀನಾದ ಕೋಚ್ ಆಗಿ ಸದಾ ಬಯಸಿದ್ದು ಗೆಲುವು ಮಾತ್ರ. ಮರಡೋನಾ ಎಂಬ ಫುಟ್ಭಾಲ್ ಮಾಂತ್ರಿಕ ಇನ್ನಿಲ್ಲ ಅನ್ನೋದು ಕ್ರೀಡಾ ಲೋಕಕ್ಕೆ ತುಂಬಲಾರದ ನಷ್ಟ. ಫುಟ್ಭಾಲ್ ರಂಗದ ಗೋಲ್ಡನ್ ಬಾಯ್, ಕಿಂಗ್, ಅರ್ಜೆಂಟೀನಾದ ಜಾದೂಗಾರ, ಚೆಂಡಿನಲ್ಲೇ ಚಮಕ್ ನೀಡೋ ಚಮತ್ಕಾರಿ ಇನ್ನು ನೆನಪು ಮಾತ್ರ..ನಿಜಕ್ಕೂ ಇದು ಕ್ರೀಡಾಲೋಕಕ್ಕೆ ಆದ ಬಹುದೊಡ್ಡ ನಷ್ಟ.