ದೇಶ ಸೇವೆ ಮಾಡಬೇಕೆಂಬ ತುಡಿತ ಪ್ರತಿಯೊಬ್ಬನಲ್ಲೂ ಇರುತ್ತದೆ. ಆದರೆ ಸೇನೆಗೆ ಸೇರಿ ಉರಿವ ಬಿಸಿಲಿನಲ್ಲಿ, ಜಡಿವ ಮಳೆಯಲ್ಲಿ ,ಕೊರೆವ ಚಳಿಯಲ್ಲಿ ನಿಂತು ದೇಶ ಕಾಯುವುದೆಂದರೆ ಸುಲಭದ ಮಾತಲ್ಲ. ಅದಕ್ಕೊಂದು ಛಲ ಮತ್ತು ಗುರಿ ತಲುಪುವ ಶ್ರಮವಿರಬೇಕು. ಅಂತಹದೊಂದು ಸಾಧನೆಗೆ ಹೆಸರಾಗಿದ್ದಾರೆ ನಮ್ಮೂರ ಯೋಧ ಪೂರ್ಣೇಶ್.
ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಸೇವ ಕುಮಾರ್ ಮತ್ತು ಸರೋಜಿನಿ ದಂಪತಿಗಳ ಪ್ರಥಮ ಪುತ್ರನಾಗಿ ಜನಿಸಿದ ಇವರದು ಕೃಷಿ ಕುಟುಂಬ. ಬಾಲ್ಯದಲ್ಲೇ ದೇಶ ಸೇವೆಯ ಕನಸನ್ನು ಕಂಡಿದ್ದ ಇವರು ಪಿ.ಯೂ.ಸಿ ಯ ನಂತರ ಮನೆಗೆ ನೆರವಾಗಲೆಂದು ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಬಿಡುವಿದ್ದಾಗಲೆಲ್ಲ ಭಾರತೀಯ ಸೇನೆಯ ಬಗ್ಗೆ ಮಹಿತಿ ಕಲೆ ಹಾಕುವುದರಲ್ಲೆ ನಿರತರಾಗುತ್ತಿದ್ದರು.
“ಒಳ್ಳೆಯ ಸ್ನೇಹಿತರಿದ್ದರೆ ಒಳ್ಳೆಯದೇ ಆಗುತ್ತದೆ” ಎಂಬ ಮಾತಿನಂತೆ ಪೂರ್ಣೇಶರ ಆಸೆಯನ್ನ ಕೇಳಿದ ನಂತರ ಗೆಳೆಯರು 2011ರಲ್ಲಿ ಹಾಸನದಲ್ಲಿ ನಡೆದ ಸೇನಾ ನೇಮಕಾತಿಗೆ ಇವರನ್ನು ಹುರಿದುಂಬಿಸಿ ಕಳುಹಿಸಿದರು. ಇದರಲ್ಲಿ ಭಾಗವಹಿಸಿ ಪೂರ್ಣೇಶ್ ಭಾರತೀಯ ಭೂ ಸೇನೆಯ 11ನೇ ಬೆಟಾಲಿಯನ್ಗೆ ಸೇರ್ಪಡೆಗೊಂಡರು. ಬಳಿಕ ತಮಿಳು ನಾಡಿನ ಊಟಿಯಲ್ಲಿ ಸೇನಾ ತರಬೇತಿ ಪಡೆದರು. ಸೈನಿಕನಾಗಿ ಸೇನಗೆ ಸೇರಿದ ನಂತರ ಜಮ್ಮು ಕಾಶ್ಮೀರದ ಉರಿ ಸೆಕ್ಟರ್ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ಎರಡು ವರ್ಷ ಸೇವೆ ಸಲ್ಲಿಸಿ. ಪ್ರಸ್ತುತ ಈಗ ಅಸ್ಸಾಂನ ಸಿಲ್ಚಾರ್ ನಲ್ಲಿ ಕರ್ತವ್ಯದಲ್ಲಿದ್ದರೆ.
ಹಳ್ಳಿಯಲ್ಲಿ ಹುಟ್ಟಿ ಬಡತನ,ಆರ್ಥಿಕ ಸಮಸ್ಯೆಗಳ ನಡುವೆ ಬದುಕಿ ತನ್ನ ಕನಸನ್ನು ಅವುಗಳಿಗೆ ಬಲಿ ಕೊಡದೆ ಅವಿರತ ಪ್ರಯತ್ನ ಮತ್ತು ಗೆಳೆಯರ ಸಲಹೆಯಿಂದ ತನ್ನ ಗುರಿ ತಲುಪಿ ನಾಡೆ ಹೆಮ್ಮೆ ಪಡುವಂತೆ ದೇಶ ಸೇವೆ ಮಾಡುತ್ತಿರುವ ನಮ್ಮೂರ ಯೋಧ ಪೂರ್ಣೇಶ್ ಪ್ರತಿಯೊಬ್ಬ ಯುವಕನಿಗೂ ಮಾದರಿ.
ನಿಮ್ಮ ನಿಷ್ಠಾವಂತ ,ನಿಸ್ವಾರ್ಥ ದೇಶ ಸೇವೆ ನಾಡಿಗೊಂದು ಉಡುಗೊರೆಯಾಗಲಿ , ಆರೋಗ್ಯ ಮತ್ತು ದೀರ್ಘಾಯುಷ್ಯವಿಟ್ಟು ಭಗವಂತ ನಿಮ್ಮನ್ನು ಕಾಪಾಡಲಿ ಎಂಬ ಶುಭ ಹಾರೈಕೆಯೊಂದಿಗೆ ..
ಹ್ಯಾಟ್ಸ್ ಆಫ್ ಪೂರ್ಣೇಶ್ ಅಣ್ಣ….
ನಯನ್ ಕುಮಾರ್

ವಿ.ವಿ. ಕಾಲೇಜು ಮಂಗಳೂರು.