ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿಗಾಗಿ ಬನ್ನೇರುಘಟ್ಟ ರಸ್ತೆಯಲ್ಲಿ ಕಳೆದ ರಾತ್ರಿ ಮರಗಳ ಮಾರಣ ಹೋಮ ಮಾಡಲಾಗಿದೆ.ಬನ್ನೇರು ಘಟ್ಟ ರಸ್ತೆಯ ಡೈರಿ ಸರ್ಕಲ್ ಬಳಿ ಇರೋ ಅಗ್ನಿಶಾಮಕ ಠಾಣೆ ಮುಂಭಾಗ ಸುಮಾರು 30 ಬೃಹತ್ ಗಾತ್ರದ ಮರಗಳನ್ನ ಕಡಿಯಲಾಗಿದೆ. ಮರಗಳನ್ನ ಕಡಿದಿರೋ ಬಗ್ಗೆ ಪರಿಸರ ಪ್ರೇಮಿಗಳಿಂದ ಮತ್ತು ಸ್ಥಳೀಯ ಶಾಸಕಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ತಮ್ಮ ಗಮನಕ್ಕೆ ಬಾರದೇ, ಕೋರ್ಟ್ ನಲ್ಲಿ ಈ ಬಗ್ಗೆ ಕೇಸ್ ನಡೆಯುತ್ತಿರುವಾಗ ಮರಗಳನ್ನ ಬಿಎಂಆರ್ ಸಿಎಲ್ ಕಡಿದಿದೆ. ಮೆಟ್ರೋ ನಿಗಮದ ಈ ಧೋರಣೆ ಕಾನೂನಿನ ವಿರುದ್ಧವಾಗಿದೆ ಎಂದು ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಆರೋಪಿಸಿದ್ದಾರೆ.


ಸದ್ಯ ಗೊಟ್ಟಿಗೆರೆ ಟು ನಾಗವಾರ ನಡುವೆ ಮೆಟ್ರೋ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಬನ್ನೇರುಘಟ್ಟ ರಸ್ತೆಯ ಜಯದೇವ, ಬಿಳೇಕಹಳ್ಳಿ, ಹುಳಿಮಾವು, ಮೀನಾಕ್ಷಿ ದೇವಸ್ಥಾನ ಈ ಭಾಗದಲ್ಲಿ ಮೆಟ್ರೋ ಕಾಮಗಾರಿ ವೇಗವಾಗಿ ನಡೆದಿದೆ. ಆದ್ರೆ ಡೈರಿ ಟು ನಾಗವಾರ ನಡುವಿನ 13 ಕಿಲೋಮೀಟರ್ ನೆಲದಾಳದ ಮಾರ್ಗ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿಲ್ಲ. ಸದ್ಯ ಚೈನಾದಿಂದ ಎರಡು ಟಿಬಿಎಂ ತರಿಸಲಾಗಿದ್ದು ಲಾಕ್ಡೌನ್ ಹಿನ್ನಲೆ ಈ ಟಿಬಿಎಂಗಳನ್ನ ನೆಲದಾಳಕ್ಕೆ ಇಳಿಸಲು ಬಿಎಂಆರ್ ಸಿಎಲ್ ಗೆ ಸಾಧ್ಯವಾಗಿಲ್ಲ. ಈ ಹಿನ್ನಲೆ ಈ ಅಂಡರ್ಗ್ರೌಂಡ್ ಕಾಮಗಾರಿ ವಿಳಂಬವಾಗ್ತಿದೆ. ಇನ್ನು ಈ ಮಾರ್ಗಕ್ಕಾಗಿಯೇ ಡೈರಿ ಬಳಿ 30 ಮರಗಳನ್ನ ನಮ್ಮ ಮೆಟ್ರೋ ಕಡಿದಿದ್ದು ಈಗ ಜನಾಕ್ರೋಶಕ್ಕೆ ಗುರಿಯಾಗಿದೆ.