ನವದೆಹಲಿ: ದೇಶದ ಸ್ವಾತಂತ್ರ್ಯ ದಿನಾಚರಣೆ ದಿನದಂದೇ ಧೋನಿ ಹಾಗೂ ರೈನಾ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ರು. ಟಿ-20 ವಿಶ್ವಕಪ್ ಆಡಿ ಧೋನಿ ಹಾಗೂ ರೈನಾ ನಿವೃತ್ತಿ ಘೋಷಿಸ್ತಾರೆ ಅಂದುಕೊಂಡಿದ್ದ ಅಭಿಮಾನಿಗಳಿಗೆ ಆಗಸ್ಟ್ 15 ರಂದು ಧೋನಿ ತಮ್ಮ ಇನ್ ಸ್ಟಾಗ್ರಾಂ ಮೂಲಕ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ರು. ಇದಾದ ಕೆಲವೇ ನಿಮಿಷದಲ್ಲಿ ಟೀಂ ಇಂಡಿಯಾದ ಇನ್ನೊಬ್ಬ ಯಶಸ್ವಿ ಆಟಗಾರ ಸುರೇಶ್ ರೈನಾ ಸಹ ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಗುಡೈ ಬೈ ಹೇಳಿದ್ರು. ಧೋನಿ ಹಾಗೂ ರೈನಾ ನಿವೃತ್ತಿ ಬಳಿಕ ಅಭಿಮಾನಿಗಳ ವಲಯದಲ್ಲಿ ನಾನಾರೀತಿಯ ಚರ್ಚೆ ನಡೆಯುತ್ತಲೇ ಇದೆ. ಧೋನಿ ಹಾಗೂ ರೈನಾರನ್ನ ಟೀಂ ಇಂಡಿಯಾದ ಹಾಲಿ ಹಾಗೂ ಮಾಜಿ ದಿಗ್ಗಜ ಆಟಗಾಗರು ನಾನಾರೀತಿಯಲ್ಲಿ ನೆನಪು ಮಾಡಿಕೊಳ್ತಿದ್ದಾರೆ. ಈ ನಡುವೆ ಪ್ರಧಾನಿ ಮೋದಿಯೂ ಸುರೇಶ್ ರೈನಾಗೆ ಒಂದು ಪತ್ರ ಬರೆದು ಅಭಿನಂದನೆಸಲ್ಲಿಸಿದ್ದಾರೆ. ಪ್ರಧಾನಿ ಪತ್ರದಲ್ಲಿ “ಈ ಜನರೇಷನ್ ನವರು ನಿಮ್ಮನ್ನು ಉತ್ತಮ ಬ್ಯಾಟ್ಸ್‌ಮನ್ ಮಾತ್ರವಲ್ಲದೆ ಅಗತ್ಯವಿದ್ದಾಗ ಓರ್ವ ಉಪಯುಕ್ತ ಬೌಲರ್ ಆಗಿಯೂ ನೆನಪಿಸಿಕೊಳ್ಳುತ್ತಾರೆ. ನಿಮ್ಮ ಫೀಲ್ಡಿಂಗ್ ಪ್ರತಿಯೊಬ್ಬ ಕ್ರಿಕೆಟಿಗನಿಗೂ ಅನುಕರಣೀಯವಾಗಿದೆ ಮತ್ತು ಸ್ಪೂರ್ತಿದಾಯಕವಾಗಿದೆ. ನಿಮ್ಮ ಕ್ಯಾಚ್ ಗಳೇ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೊಸ ಮೈಲುಗಲ್ಲನ್ನ ಸಾಧಿಸಿದೆ. ಫೀಲ್ಡ್‌ನಲ್ಲಿ ನೀವು ಉಳಿಸಿದ ರನ್‌ಗಳ ಸಂಖ್ಯೆಯನ್ನು ಎಣಿಕೆಮಾಡಲು ದಿನಗಳೇ ಬೇಕಾಗಬಹುದು.” ಎಂದು ಪ್ರಧಾನಿ ನರೇಂದ್ರ ಮೋದಿ ರೈನಾಗೆ ಬರೆದ ಪತ್ರದಲ್ಲಿ ಅಭಿನಂದನಾ ಮಾತುಗಳನ್ನ ದಾಖಲಿಸಿದ್ದಾರೆ.