ದೆಹಲಿ: ದೇಶದಲ್ಲಿ ನೂತನ ಸಂಸತ್ ಭವನ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಇಂದು ಹೊಸ ಸಂಸತ್ ಭವನ ಕಟ್ಟಡಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಿದ್ದಾರೆ.
ಈ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಟಾಟಾ ಟ್ರಸ್ಟ್ ಚೇರ್‌ಮನ್ ರತನ್ ಟಾಟಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯಸಭೆ ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್, ಕೇಂದ್ರ ಸಚಿವ ಹೆಚ್‌ಎಸ್ ಪುರಿ ಹಾಗೂ ಹಲವು ಧಾರ್ಮಿಕ ಮುಖಂಡರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ.
ಮರು ನಿರ್ಮಾಣ ಯೋಜನೆ (ಸೆಂಟ್ರಲ್ ವಿಸ್ತಾ ಪ್ರಾಜೆಕ್ಟ್) ಯೋಜನೆಯ ಅಡಿಯಲ್ಲಿ ಸಂಸತ್ ಭವನವನ್ನು ನಿರ್ಮಾಣ ಮಾಡಲಾಗುತ್ತಿದೆ. 64,500 ಚದರ ಮೀಟರ್ ಪ್ರದೇಶದಲ್ಲಿ ತ್ರಿಭುಜಾಕೃತಿಯ ಸಂಸತ್ ಆವರಣ ನಿರ್ಮಾಣ ಆಗಲಿದೆ. ಈ ಯೋಜನೆಗೆ 971 ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆ ಇದೆ. ಟಾಟಾ ಪ್ರಾಜೆಕ್ಟ್ ಲಿಮಿಟೆಡ್ 861.90 ಕೋಟಿ ರೂಪಾಯಿಗೆ ಸಂಸತ್ ಭವನ ನಿರ್ಮಾಣ ಗುತ್ತಿಗೆ ಕಾಮಗಾರಿಯ ಬಿಡ್ ಅನ್ನು ಗೆದ್ದುಕೊಂಡಿದೆ. ಹೊಸ ಕಟ್ಟಡ ಹಳೆಯ ಕಟ್ಟಡದಷ್ಟೇ ಎತ್ತರ ಇರಲಿದ್ದು, ನೆಲ ಮಹಡಿ, ಮೊದಲ ಹಾಗೂ 2ನೇ ಅಂತಸ್ತನ್ನು ಹೊಂದಿರಲಿದೆ.
ನೂತನ ಸಂಸತ್ ಭವನ ನಿರ್ಮಾಣವಾದ ಬಳಿಕ ಹಳೆಯ ಕಟ್ಟಡವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗುತ್ತದೆ. ಹೊಸ ಸಂಸತ್ ಭವನ ಕಾರ್ಯಾರಂಭಿಸುವವರೆಗೂ ಸಂಸತ್ತಿನ ಚಟುವಟಿಕೆಗಳು ಹಳೆಯ ಕಟ್ಟಡದಲ್ಲೇ ನಡೆಯಲಿವೆ. ಬಳಿಕ ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸಿ ದೇಶದ ಪುರಾತತ್ವ ಸಂಪತ್ತು ಎಂದು ಪರಿಗಣಿಸಲಾಗುತ್ತದೆ.