ನವದೆಹಲಿ- ಬಾಬಾ ರಾಮ್ ದೇವ್ ಅವರ ತಂಡ ಸಿದ್ಧಪಡಿಸಿರುವ ಔಷಧಿ ಕೊರೊನಿಲ್ ಮಾರುಕಟ್ಟೆಗೆ ಬಿಡುಗಡೆ ವಿಚಾರದಲ್ಲಿ ಗೊಂದಲಗಳು ಉಂಟಾಗಿತ್ತು. ಕೊರೊನಿಲ್ ಕೊರೊನಾಗೆ ಮದ್ದು ಅಂತ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ, ಈ ಔಷಧಿಗೆ ಬ್ರೇಕ್ ಹಾಕಿತ್ತು.
ಈಗ ಕೇಂದ್ರ ಸರ್ಕಾರ ಕೊರೊನಿಲ್ ಮಾರಾಟ ಮಾಡಲು ಪತಂಜಲಿ ಸಂಸ್ಥೆಗೆ ಒಪ್ಪಿಗೆ ನೀಡಿದೆ. ಆದರೆ ಇದನ್ನು ಕೊರೊನಾಗೆ ಮದ್ದು ಅಂತ ಮಾರಾಟ ಮಾಡಬಾರದು, ಬದಲಾಗಿ ಇಮ್ಯುನಿಟಿ ಬೂಸ್ಟರ್ ಅಂತಲೇ ಮಾರಾಟ ಮಾಡಬೇಕು ಎಂದು ಷರತ್ತು ವಿಧಿಸಿದೆ.
ಪತಂಜಲಿ ಸಂಸ್ಥೆಯೂ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಯಾವುದೇ ಕಾರಣಕ್ಕೂ ಕೊರೊನಾಗೆ ಮದ್ದು ಅಂತ ಮಾರಾಟ ಮಾಡಲ್ಲ ಅಂತ ಒಪ್ಪಿಕೊಂಡಿದೆ. ಈಗ ಪತಂಜಲಿಯ ಬಹು ನಿರೀಕ್ಷಿತ ಇಮ್ಯುನಿಟಿ ಬೂಸ್ಟರ್ ಮುಂದಿನ ವಾರದಲ್ಲೇ ಎಲ್ಲಾ ಅಂಗಡಿಗಳಲ್ಲೂ ಲಭ್ಯವಾಗುವ ಸಾಧ್ಯತೆಯಿದೆ.