ಕಾನ್ಪುರ-ಪರಮ ಪಾತಕಿ, ಗ್ಯಾಂಗ್ ಸ್ಟರ್, ಇತ್ತೀಚೆಗಷ್ಟೇ 8 ಪೊಲೀಸರನ್ನು ಕೊಂದ ಕಾನ್ಪುರದ ವಿಕಾಸ್ ದುಬೆಯ ಎನ್ ಕೌಂಟರ್ ನಡೆದಿದೆ. ನಿನ್ನೆಯಷ್ಟೇ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ದೇವಸ್ಥಾನದಲ್ಲಿ ಹೈಡ್ರಾಮಾ ಮಾಡಿ ಸಿಲುಕಿಹಾಕಿಕೊಂಡಿದ್ದ ಪಾತಕಿಯನ್ನು ಇಂದು ಕಾನ್ಪುರಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ, ದಾರಿ ಮಧ್ಯೆ ಪೊಲೀಸರ ಕಾರು ಪಲ್ಟಿಯಾಗಿದ್ದು, ವಿಕಾಸ್ ದುಬೆ ತಪ್ಪಿಸಿಕೊಳ್ಳಲು ಯತ್ನಿಸಿದ ಎನ್ನಲಾಗಿದೆ. ಈ ವೇಳೆ ಗುಂಡಿನ ಚಕಮಕಿ ಕೂಡ ನಡೆದಿದ್ದು, ವಿಕಾಸ್ ದುಬೆಯನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.

ಎನ್ ಕೌಂಟರ್ ನಿಂದ ತಪ್ಪಿಸಿಕೊಳ್ಳಲು ನಿನ್ನೆ ಹೈಡ್ರಾಮ!
ವಿಕಾಸ್ ದುಬೆ ಉತ್ತರ ಪ್ರದೇಶದಿಂದ ಮಧ್ಯಪ್ರದೇಶಕ್ಕೆ ಆರು ದಿನಗಳ ಹಿಂದೆಯೇ ಬಂದಿದ್ದ, ಅಲ್ಲದೇ ಆರು ದಿನಗಳಲ್ಲಿ 1300 ಕಿಲೋಮೀಟರ್ ಪ್ರಯಾಣ ಮಾಡಿದ್ದ. ಪೊಲೀಸರಿಗೆ ನೇರವಾಗಿ ಶರಣಾದ್ರೆ, ಎನ್ ಕೌಂಟರ್ ಕಟ್ಟಿಟ್ಟ ಬುತ್ತಿ ಅಂತ ಅರಿತಿದ್ದ, ವಿಕಾಸ್ ಗೆ ಆತನ ವಕೀಲರು ಕೂಡ ಐಡಿಯಾ ನೀಡಿದ್ದಾರೆ ಎನ್ನಲಾಗಿದ್ದು, ಅದರಂತೆ ನಿನ್ನೆ ಉಜ್ಜಯಿನಿ ಮಹಾಕಾಳ ದೇವಸ್ಥಾನದಲ್ಲಿ ಬಂದು, ಮೇ ಹೂ ವಿಕಾಸ್ ದುಬೆ..ಕಾನ್ಪುರವಾಲಾ, ಪೊಲೀಸರಿಗೆ ಮಾಹಿತಿ ಕೊಂಡಿ ಅಂತ ದೇವಸ್ಥಾನದ ಒಳಗಡೆನೇ ಕಿರುಚಾಡಿ ಬಿಟ್ಟಿದ್ದ.
ಜನರೆದುರು ನಾನೇ ವಿಕಾಸ್ ದುಬೆ ಅಂತ ಸೌಂಡ್ ಮಾಡಿದ್ರೆ, ಪೊಲೀಸರು ಅರೆಸ್ಟ್ ಮಾಡ್ಲೇಬೇಕಾಗುತ್ತೆ, ಎನ್ ಕೌಂಟರ್ ನಿಂದ ತಪ್ಪಿಸಿಕೊಳ್ಳಬಹುದು ಎಂದು ದುಬೆ ಪ್ಲಾನ್ ಮಾಡಿ, ಸಕ್ಸಸ್ ಕೂಡ ಆಗಿದ್ದ. ಮಧ್ಯಪ್ರದೇಶದ ಪೊಲೀಸರು ಉತ್ತರ ಪ್ರದೇಶದ ಪೊಲೀಸರಿಗೆ ದುಬೆಯನ್ನು ಹಸ್ತಾಂತರ ಮಾಡಿದ್ರು, ಜೊತೆಗೆ ನಿನ್ನೆಯೇ ವೀಡಿಯೋ ಕಾನ್ಪರೆನ್ಸ್ ಮೂಲಕ ಕೋರ್ಟ್ ಗೂ ಕೂಡ ಹಾಜರಪಡಿಸಲಾಗಿತ್ತು ಎನ್ನಲಾಗಿದೆ. ಇಂದು ದಾರಿ ಮಧ್ಯೆ ಕಾರು ಪಲ್ಟಿಯಾಗಿದ್ದು, ಈ ವೇಳೆ ವಿಕಾಸ್ ದುಬೆ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಗುಂಡಿನ ಚಕಮಕಿಯಲ್ಲಿ ಪಾತಕಿ ಸಾವನ್ನಪ್ಪಿದ್ದಾನೆ.

ವಿಕಾಸ್ ದುಬೆ ಮಾಡಿದ್ದೇನು ಗೊತ್ತಾ?
ಮಗನನ್ನು ಎನ್ ಕೌಂಟರ್ ಮಾಡಿ ಅಂದಿದ್ದ ದುಬೆ ತಾಯಿ!..
ತನ್ನ ಮಗನನ್ನು ಎನ್‌ಕೌಂಟರ್ ಮಾಡಿ ಕೊಂದು ಹಾಕಿ,ಅವನು ತಪ್ಪು ಮಾಡಿದ್ದಾನೆ ಅಂತ ದುಬೆ ತಾಯಿ ಸರಳದೇವಿ ಏಳು ದಿನಗಳ ಹಿಂದಿನ ರಕ್ತಪಾತ ನೋಡಿ ಹೇಳಿದ್ದರು.
ಉತ್ತರಪ್ರದೇಶದ ಕಾನ್ಪುರದಲ್ಲಿ ಹಳೆಯ ಕೊಲೆ ಕೇಸ್ ಸಂಬಂಧ ಜುಲೈ 2ರಂದು ಮಧ್ಯರಾತ್ರಿ ರೌಡಿ ವಿಕಾಸ್ ದುಬೆಯನ್ನು ಬಂಧಿಸೋಕೆ ಅಂತ ಡಿವೈಎಸ್‌ಪಿ ನೇತೃತ್ವದಲ್ಲಿ ಪೊಲೀಸರು ತೆರಳಿದ್ದರು. ಈ ವೇಳೆ ವಿಕಾಸ್ ದುಬೆಯ ಮನೆ ಮುಂದೆ ಜೆಸಿಬಿ ನಿಲ್ಲಿಸಿ, ಪೊಲೀಸರು ಜೀಪಿನಿಂದ ಇಳಿಯುವಂತೆ ಪ್ಲಾನ್ ಮಾಡಿದ್ದರು. ಪೊಲೀಸರು ಜೀಪಿನಿಂದ ಇಳಿದಾಗ, ವಿಕಾಸ್ ದುಬೆಯ ಸಹಚರರು ಕಟ್ಟಡದ ಮೇಲೆ ನಿಂತುಕೊಂಡು ಪೊಲೀಸರ ಮೇಲೆ ಫಯರ್ ಮಾಡಿದರು. ಈ ವೇಳೆ 8 ಮಂದಿ ಪೊಲೀಸರು ರೌಡಿಗಳ ಗುಂಡಿಗೆ ಬಲಿಯಾಗಿದ್ದರು.. ಓರ್ವ ಡಿವೈಎಸ್‌ಪಿ, ಓರ್ವ ಇನ್ಸ್‌ಪೆಕ್ಟರ್, ಇಬ್ಬರು ಸಬ್ ಇನ್ಸ್‌ಪೆಕ್ಟರ್ ಮತ್ತು ನಾಲ್ಕು ಮಂದಿ ಕಾನ್ಸ್‌ಟೆಬಲ್‌ಗಳು ರೌಡಿಗಳ ದಾಳಿಗೆ ಪ್ರಾಣ ಕಳೆದುಕೊಂಡಿದ್ದರು.. ಈ ಘಟನೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು..

ವಿಕಾಸ್ ದುಬೆ ಮನೆಯನ್ನು ನೆಲಸಮ ಮಾಡಿದ್ದ ಜಿಲ್ಲಾಡಳಿತ
36 ಗಂಟೆಯಲ್ಲಿ ಪಾತಕಿಯ ಮನೆ ಉಡೀಸ್ !
ಪೊಲೀಸರು ವಿಕಾಸ್ ದುಬೆಯನ್ನು ಅರೆಸ್ಟ್ ಮಾಡೋಕೆ ಬಂದಾಗ ದಾರಿಯಲ್ಲಿ ಜೆಸಿಬಿ ಒಂದನ್ನು ಅಡ್ಡವಾಗಿ ನಿಲ್ಲಿಸಲಾಗಿತ್ತು. ಹೀಗಾಗಿ ಪೊಲೀಸರು ಸೀದಾ ಮನೆಯೊಳಗೆ ಬರೋಕೆ ಸಾಧ್ಯವಾಗಿರಲಿಲ್ಲ. ಇದೇ ಜೆಸಿಬಿಯನ್ನು ಬಳಸಿಕೊಂಡು ಜಿಲ್ಲಾಡಳಿತ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ, ವಿಕಾಸ್ ದುಬೆಗೆ ಸೇರಿದ ಮನೆ, ಪಕ್ಕದಲ್ಲೇ ತನ್ನ ಸಹಚರರ ವಾಸಕ್ಕಾಗಿ ಕಟ್ಟಲಾಗಿದ್ದ ಮನೆಯನ್ನು ಜೆಸಿಬಿ ಮೂಲಕ ನೆಲಸಮ ಮಾಡಲಾಗಿತ್ತು.. ಜೊತೆಗೆ ಮನೆಯಲ್ಲಿ ಪಾರ್ಕ್ ಮಾಡಲಾಗಿದ್ದ ಹಲವಾರು ಐಷಾರಾಮಿ ಕಾರುಗಳನ್ನು ಜೆಸಿಬಿ ಸಹಾಯದಿಂದ ನುಚ್ಚುನೂರು ಮಾಡಲಾಗಿತ್ತು.
ವಿಕಾಸ್ ದುಬೆಯ ಮೇಲಿದೆ ಹಲವು ಆರೋಪ
1990ರಿಂದ ವಿಕಾಸ್ ದುಬೆ ರೌಡಿಸಂನಲ್ಲಿ ಸಕ್ರೀಯನಾಗಿದ್ದ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ವಿಕಾಸ್ ದುಬೆ, ಬಳಿಕ ಪೊಲೀಸರಿಂದ ಬಂಧಿತನಾಗಿ ಜೈಲು ಸೇರಿದ್ದ.. ಜೈಲಿನಿಂದ ಹೊರಬಂದ ಬಳಿಕವೂ ದುಬೆ ಅಪರಾಧ ಪ್ರವೃತ್ತಿಗಳು ಮುಂದುವರಿದಿತ್ತು..
ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಿ ಗೆಲುವು
2000ದಲ್ಲಿ ವಿಕಾಸ್ ದುಬೆ ಕಾನ್ಪುರದ ತಾರಾಚಂದ್ ಇಂಟರ್ ಕಾಲೇಜ್ ಮ್ಯಾನೇಜರ್ ಸಿದ್ಧೇಶ್ವರ್ ಪಾಂಡೆ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಈ ಕೇಸ್‌ನಲ್ಲಿ ಬಂಧಿತನಾಗಿ ಜೈಲು ಸೇರಿದ್ದ. ಆದ್ರೆ ಜೈಲಿನಲ್ಲಿ ಇದ್ದುಕೊಂಡೇ ಚುನಾವಣೆಗೆ ಸ್ಪರ್ಧೆ ಮಾಡಿದ್ದ. ಜಿಲ್ಲಾ ಪಂಚಾಯತ್ ಸ್ಥಾನಕ್ಕೆ ಸ್ಪರ್ಧಿಸಿದ್ದ ವಿಕಾಸ್ ದುಬೆ ಗೆಲುವು ಸಾಧಿಸಿ ಸದಸ್ಯನಾಗಿದ್ದ.
2001ರಲ್ಲಿ ಬಿಜೆಪಿ ಸಚಿವನ ಭೀಕರ ಕೊಲೆ!
ಪೊಲೀಸ್ ಠಾಣೆ ಒಳಗೆ ನಡೆದಿತ್ತು ರಕ್ತಪಾತ…!
2001ರಲ್ಲಿ ಕಾನ್ಪುರ ಬಿಜೆಪಿ ಮುಖಂಡ ಸಂತೋಷ್ ಶುಕ್ಲಾ ಕೊಲೆಯಾಗತ್ತೆ. ಸಂತೋಷ್ ಶುಕ್ಲಾ ಆಗಿನ ಬಿಜೆಪಿ ಸರ್ಕಾರದಲ್ಲಿ ಸಚಿವರೂ ಆಗಿದ್ರು. ಬಿಗಿ ಭದ್ರತೆಯ ನಡುವೆಯೂ ವಿಕಾಸ್ ದುಬೆ ಸಂತೋಷ್ ಶುಕ್ಲಾ ಅವರನ್ನು ಅಟ್ಟಾಡಿಸಿಕೊಂಡು ಹೋಗಿ ಶಿವ್ಲಿ ಪೊಲೀಸ್ ಠಾಣೆಯ ಒಳಗಡೆ ಕೊಲೆ ಮಾಡಿದ್ದ. ಘಟನೆ ವೇಳೆ ಪ್ರತಿರೋಧಿಸಿದ್ದ ಇಬ್ಬರು ಪೊಲೀಸರನ್ನೂ ಕೊಲೆ ಮಾಡಲಾಗಿತ್ತು. 2001ರಲ್ಲಿ ಈ ಘಟನೆ ನಡೆದು ಪ್ರಕರಣ ದಾಖಲಾದ್ರೂ ವಿಕಾಸ್ ದುಬೆ ಮಾತ್ರ ಅರೆಸ್ಟ್ ಆಗಿರಲಿಲ್ಲ. 2002ರಲ್ಲಿ ಆರೋಪಿ ತಾನೇ ನ್ಯಾಯಾಲಯದ ಮುಂದೆ ಶರಣಾಗಿದ್ದ. ಆದ್ರೆ ಬಳಿಕ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ವಿಕಾಸ್ ದುಬೆ ಜೈಲಿನಿಂದ ಹೊರಗೆ ಬಂದಿದ್ದ.. ಸಚಿವರೊಬ್ಬರ ಕೊಲೆ ಮಾಡಿಯೂ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಅಂದ್ರೆ ಆಶ್ಚರ್ಯ ಆಗತ್ತೆ ಅಲ್ವಾ.. ಅಸಲಿಗೆ ವಿಕಾಸ್ ದುಬೆ ಮೇಲಿನ ಭಯಕ್ಕೆ ಯಾವ ಪೊಲೀಸ್ ಅಧಿಕಾರಿಗಳೂ ಆತನ ವಿರುದ್ಧ ಸಾಕ್ಷ್ಯ ನುಡಿದಿರಲಿಲ್ಲ.. ಈ ಪ್ರಕರಣದ ನಂತ್ರ ವಿಕಾಸ್ ದುಬೆ ಹತ್ತಿರ ಹೋಗೋಕೂ ಪೊಲೀಸರು ಭಯಪಡುತ್ತಿದ್ದರು. ಸಂತೋಷ್ ಶುಕ್ಲಾ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಇದ್ದುಕೊಂಡೇ, ರಾಮ್ ಬಾಬು ಯಾದವ್ ಅನ್ನೋ ವ್ಯಕ್ತಿಯ ಕೊಲೆ ಮಾಡಿಸಿದ್ದ…
2004ರಲ್ಲಿ ಹೆಸರಾಂತ ಉದ್ಯಮಿ ದಿನೇಶ್ ದುಬೆ ಎಂಬಾತನನ್ನು ವಿಕಾಸ್ ದುಬೆ ಕೊಲೆ ಮಾಡಿದ್ದ. ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಈ ಕೊಲೆ ನಡೆದಿತ್ತು. ಈ ಕೇಸ್‌ನಲ್ಲೂ ವಿಕಾಸ್ ದುಬೆ ಬಂಧಿತನಾಗಿದ್ದ. ಆದ್ರೆ ಕೋರ್ಟ್‌ನಲ್ಲಿ ವಿಕಾಸ್ ದುಬೆ ವಿರುದ್ಧ ಸಾಕ್ಷಿ ಹೇಳೋಕೆ ಯಾರಾದ್ರೂ ಬರ್ಬೇಕಲ್ವಾ.. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಈ ಕೇಸ್‌ನಲ್ಲೂ ವಿಕಾಸ್ ದುಬೆ ಖುಲಾಸೆಗೊಂಡಿದ್ದ. ಇದಾದ ನಂತ್ರ 2013ರಲ್ಲಿ ಮತ್ತೊಂದು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. 2018ರಲ್ಲಿ ತನ್ನ ಸಂಬಂಧಿಕ ಅನುರಾಗ್ ಅನ್ನೋವ್ರ ಕೊಲೆ ಪ್ರಕರಣದಲ್ಲೂ ವಿಕಾಸ್ ದುಬೆ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಹೀಗೆ ವಿಕಾಸ್ ದುಬೆಯ ಪಾತಕ ಕೃತ್ಯಗಳಿಗೆ ಲೆಕ್ಕವೇ ಇರಲಿಲ್ಲ. ಯೋಗಿ ಆದಿತ್ಯನಾಥ್ ಸರ್ಕಾರ ಬಂದ ನಂತರ ಉಳಿದುಕೊಂಡಿದ್ದ ಪರಮ ಪಾತಕಿಯ ಅಂತ್ಯವೂ ಕೂಡ ಇಂದು ಆಗಿದೆ. ವಿಕಾಸ್ ದುಬೆಯ ಎನ್ ಕೌಂಟರ್ ನಿಂದ ಉತ್ತರ ಪ್ರದೇಶದ ಅದೆಷ್ಟೋ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವುದರಲ್ಲಿ ಅನುಮಾನವಿಲ್ಲ.