ನಟ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಜೊತೆಯಾಗಿ ನಟಿಸುತ್ತಿರುವ ಹೊಸ ಸಿನಿಮಾದ ಬಗ್ಗೆ ಆರಂಭದಿಂದಲೂ ಸಿನಿಪ್ರಿಯರಿಗೆ ಕುತೂಹಲವಿತ್ತು. ಇದೀಗ ಚಿತ್ರದ ಟೈಟಲ್ ಘೋಷಣೆ ಆಗಿದ್ದು, ಜೊತೆಗೆ ಫಸ್ಟ್‌ಲುಕ್ ಕೂಡ ರಿಲೀಸ್ ಆಗಿದೆ.
ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ಬಹು ನಿರೀಕ್ಷಿತ ಸಿನಿಮಾ ರಾಧೆ-ಶ್ಯಾಮ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಸಾಹೋ ಚಿತ್ರದ ಶೂಟಿಂಗ್ ವೇಳೆ ನಟ ಪ್ರಭಾಸ್ ತಮ್ಮ 20ನೇ ಸಿನಿಮಾವನ್ನು ಘೋಷಣೆ ಮಾಡಿದ್ದರು. ಆದರೆ ಚಿತ್ರದ ಟೈಟಲ್ ಏನು ಅನ್ನೋದನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಈಗ ಅಧಿಕೃತವಾಗಿ ಚಿತ್ರದ ಟೈಟಲ್ ‘ರಾಧೆ ಶ್ಯಾಮ್‘ ಅಂತ ಘೋಷಣೆ ಮಾಡಲಾಗಿದೆ. ಜೊತೆಗೆ ಪ್ರಭಾಸ್-ಪೂಜಾ ಹೆಗ್ಡೆ ಜೊತೆಗಿರುವ ಒಂದು ಸುಂದರವಾದ ಫಸ್ಟ್‌ಲುಕ್ ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿದೆ.

ಆ್ಯಕ್ಷನ್ ಸಿನಿಮಾಗಳಿಗೆ ಫೇಮಸ್ ಆಗಿದ್ದ ನಟ ಪ್ರಭಾಸ್, ‘ರಾಧೆ ಶ್ಯಾಮ್’ ಚಿತ್ರದಲ್ಲಿ ಲವರ್ ಬಾಯ್ ಗೆಟಪ್‌ನಲ್ಲಿ ಮಿಂಚಲಿದ್ದಾರೆ ಅನ್ನೋದನ್ನು ಟೈಟಲ್ ಮತ್ತು ಫೋಸ್ಟರ್‌ಗಳು ಹೇಳುತ್ತಿವೆ.
ಪ್ರಭಾಸ್ ಪಾಲಿಗೆ ಜುಲೈ 10 ಬಹಳ ವಿಶೇಷವಾದ ದಿನ. ಯಾಕಂದ್ರೆ ಸಿನಿಲೋಕದಲ್ಲಿ ಸಂಚಲ ಮೂಡಿಸಿದ್ದ ಸಿನಿಮಾ ಬಾಹುಬಲಿ, 5 ವರ್ಷದ ಹಿಂದೆ ಇದೇ ದಿನ ರಿಲೀಸ್ ಆಗಿತ್ತು. ಆ ನೆನಪಿನಲ್ಲೇ ಈಗ ತಮ್ಮ ಮುಂದಿನ ಸಿನಿಮಾ ‘ರಾಧೆ ಶ್ಯಾಮ್’ನ ಟೈಟಲ್ ಮತ್ತು ಫಸ್ಟ್‌ಲುಕ್ ರಿಲೀಸ್ ಮಾಡಿದ್ದಾರೆ. ಈ ಚಿತ್ರವನ್ನು ರಾಧ ಕೃಷ್ಣ ಕುಮಾರ್ ನಿರ್ದೇಶನ ಮಾಡಿದ್ದು, ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದು, ಮುರಳಿ ಶರ್ಮಾ, ಭಾಗ್ಯಶ್ರೀ, ಪ್ರಿಯಾದರ್ಶಿ ಮುಂತಾದವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾದ ಟೈಟಲ್ ಹಾಗೂ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.