ಬೆಂಗಳೂರು- ಬಾಗಿಲು ಹಾಕಿದ ಮನೆಗಳನ್ನೇ ರಾತ್ರಿ ಹಗಲು ಹೊಂಚು ಹಾಕಿ ನೋಡುತ್ತಾ ನೋಡುತ್ತಲೇ, ಆ ಮನೆಯನ್ನು ದೋಚುವ ಕಳ್ಳನೊಬ್ಬನ ಬಂಧನವಾಗಿದೆ. ಏರಿಯಾ ಏರಿಯಾಗಳಲ್ಲಿ ಓಡಾಡುತ್ತಾ, ಮನೆಗಳ ಸುತ್ತಮುತ್ತಲಿನ ವಾತಾವರಣವನ್ನು ಗಮನಿಸುತ್ತಾ, ಬಾಗಿಲು ತೆರೆಯದೇ ಇರುವ ಮನೆಗಳತ್ತ ಚಿತ್ತ ನೆಡುತ್ತಾ, ಒಂದೆರಡು ದಿನಗಳ ಗಮನಿಸುವಿಕೆಯ ನಂತರ ಆ ಮನೆಯನ್ನೇ ಟಾರ್ಗೆಟ್ ಮಾಡುವ ಮನೆಗಳ್ಳ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಾಲುಕುರ್ಕಿ ಗ್ರಾಮದ 26 ವರ್ಷದ ಯೋಗೇಶನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಮನೆಗಳ್ಳನನ್ನು ಬಂಧಿಸಿದ್ದು, ಬರೋಬ್ಬರಿ 10ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಯೋಗೇಶ ಬಾಗಲಗುಂಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 3, ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2ಮನೆಗಳಲ್ಲಿ ಕಳ್ಳತನ ಮಾಡಿದ್ದು ವಿಚಾರಣೆ ವೇಳೆ ಬಯಲಾಗಿದೆ.

ಬಾಗಲಗುಂಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈತ ಕಳ್ಳತನ ಮಾಡುತ್ತಿದ್ದಾಗಲೇ ರೆಂಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಬಾಗಿಲು ಹಾಕಿದ ಮನೆಯೊಂದರಲ್ಲಿ ಕಳ್ಳತನದಲ್ಲಿ ತೊಡಗಿರುವಾಗಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ಕೊಟ್ಟು, ಈತನನ್ನು ಸೆರೆಹಿಡಿಯಲು ಕಾರಣವಾಗಿದ್ದಾರೆ.