ಕೊರೋನಾ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತನ್ನ ಕಬಂಧ ಬಾಹುಗಳನ್ನ ಚಾಚುತ್ತಲೇ ಸಾಗ್ತಿದೆ. ಈಗ ಈ ಮಹಾಮಾರಿ ಕೊರೋನಾ ಕಣ್ಣು ಬಿಎಂಟಿಸಿ ಮೇಲೆ ಬಿದ್ದಿದೆ. ಆರಂಭದಲ್ಲಿ ಬಿಎಂಟಿಸಿ ಡಿಪೋ 24 ರಲ್ಲಿ ಕಾರ್ಯನಿವರ್ಹಿಸುತ್ತಿದ್ದ ಸಿಬ್ಬಂದಿ ಓರ್ವನಿಗೆ ಕಾಣಿಸಿಕೊಂಡ ಕೊರೋನಾ ಈಗ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಪತ್ನಿಗೂ ವಕ್ಕರಿಸಿಕೊಂಡಿದೆ. ಇದರ ಜೊತೆಗೆ ಇಂದಿರಾ ನಗರದ ಡಿಪೋ ನಂಬರ್ 6 ರಲ್ಲಿ ಟ್ರಾಫಿಕ್ ಕಂಟ್ರೋಲರಾಗಿ ಕಾರ್ಯನಿರ್ವಹಿಸ್ತಿದ್ದ ವ್ಯಕ್ತಿಗೂ ಕೊರೋನಾ ದೃಢಪಟ್ಟಿದೆ.. ಈತ ಕಳೆದ 7 ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದು ನಗರದ ಸೆಂಟ್ ಜೌನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಈತನ ಆರೋಗ್ಯದಲ್ಲಿ ಚೇತರಿಕೆ ಕಾಣದೇ ಇದ್ದಾಗ ವೈದ್ಯರು ಕೊರೋನಾ ಟೆಸ್ಟ್ ಮಾಡಿದಾರೆ. ಈಗ ಈತನಿಗೂ ಮಹಾಮಾರಿ ಎಂಟ್ರಿಕೊಟ್ಟಿರೋದು ದೃಢಪಟ್ಟಿದೆ. ಇನ್ನು ಈತನ ಟ್ರಾವೆಲ್ ಹಿಸ್ಟರಿ ಕಲೆಹಾಕೋಕೆ ಆರೋಗ್ಯ ಇಲಾಖೆ ಹೆಣಗಾಡ್ತಿದೆ.

ಇದರ ಜೊತೆಗೆ ಕೋರಮಂಗಲದ ಡಿಪೋ ನಂಬರ್ 15ಕ್ಕೂ ಕೊರೋನಾ ಭಯ ಎದುರಾಗಿದೆ. ಕೋರಮಂಗಲ ಡಿಪೋದಲ್ಲಿ ಕಾರ್ಯನಿರ್ವಹಿಸ್ತಿದ್ದ ಕಂಡಕ್ಟರ್ ಗೆ ಕಳೆದ ಮೂರು ದಿನಗಳಿಂದ ಆರೋಗ್ಯದಲ್ಲಿ ಏರು ಪೇರಾಗಿದೆ. ಹೀಗಾಗಿ ಈತನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತನಿಗೂ ಕೊರೋನಾ ಸೋಂಕು ತಗುಲಿರೋ ಶಂಕೆಯಿಂದ ಈತನ ಗಂಟಲು ದ್ರವದ ಪರೀಕ್ಷೆಗೆ ಕಳುಹಿಸಲಾಗಿದೆ. ಇದರಿಂದಾಗಿ ಕೋರಮಂಗಲ ಡಿಪೋದಲ್ಲಿ ಸಿಬ್ಬಂದಿ ಆತಂಕಿತರಾಗಿದ್ದಾರೆ.

ಇನ್ನೊಂದೆಡೆ ಬಿಎಂಟಿಸಿಯಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತೆ ಕಡೆಗಣಿಸಿರೋ ಆರೋಪ ಕೇಳಿಬರ್ತಿದೆ. ಕಂಡಕ್ಟರ್ ಹಾಗೂ ಡ್ರೈವರ್ ಗಳಿಗೆ ಸರಿಯಾಗಿ ಮಾಸ್ಕ್ ಹಾಗೂ ಗ್ಲೌಸ್ ಗಳನ್ನ ವಿತರಿಸುತ್ತಿಲ್ಲ. ಇನ್ನು ಹ್ಯಾಂಡ್ ಸ್ಯಾನಿಟೈಸರ್ ಸಹ ನಿಗಮದ ವತಿಯಿಂದ ನೀಡುತ್ತಿಲ್ಲ. ಹೀಗಾಗಿ ತಮ್ಮ ಸುರಕ್ಷತೆಯನ್ನ ಬಿಎಂಟಿಸಿ ಸಂಪೂರ್ಣ ಕಡೆಗಣಿಸಿದೆ ಎಂದು ಆರೋಪಿಸಿ ಕೋರಮಂಗಲ ಡಿಪೋದ ಕಂಡಕ್ಟರ್ಸ್ ಹಾಗೂ ಡ್ರೈವರ್ಸ್ ಬೆಳಗಿನಿಂದಲೂ ಪ್ರತಿಭಟನೆ ನಡೆಸಿದ್ದಾರೆ. ಆದ್ರೆ ಬಿಎಂಟಿಸಿ ಮಾತ್ರ ಯಾವುದೇ ಮುಂಜಾಗ್ರತಾ ಕ್ರಮವನ್ನ ಕೈಗೊಳ್ಳದಿರೋದು ಪ್ರಯಾಣಿಕರಲ್ಲೂ ಹಾಗೂ ಸಿಬ್ಬಂದಿಯಲ್ಲೂ ಆತಂಕ ಹೆಚ್ಚಿಸುವಂತೆ ಮಾಡಿದೆ.