ನವದೆಹಲಿ: ತಮಿಳುನಾಡು ಮೂಲದ ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ದೆಹಲಿಯಲ್ಲಿಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಹಾಗೂ ವಕ್ತಾರ ಸಂಬಿತ್ ಪಾತ್ರಾ ಸಮ್ಮುಖದಲ್ಲಿ ಅಣ್ಣಾಮಲೈ ಕಮಲ ಪಕ್ಷಕ್ಕೆ ಸೇರ್ಪಡೆಗೊಂಡರು.
ಬಿಜೆಪಿ ಸೇರ್ಪಡೆ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರನ್ನ ಅಣ್ಣಾ ಮಲೈ ಭೇಟಿಯಾದ್ರು, ಈವೇಳೆ ಅಣ್ಣಾಮಲೈಗೆ ಪಕ್ಷದ ಶಾಲು ಹೊದಿಸಿ ಜೆಪಿ ನಡ್ಡಾ ಕಮಲ ಪಕ್ಷಕ್ಕೆ ಸ್ವಾಗತ ಕೋರಿದ್ರು. ಈವೇಳೆ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾದ ಬಿ.ಎಲ್.ಸಂತೋಷ್, ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಮುರುಗನ್, ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ದಕ್ಷ ಅಧಿಕಾರಿ ಎಂದು ಕರೆಸಿಕೊಂಡಿದ್ದ ಅಣ್ಣಾಮಲೈ, ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ರಾಜಕೀಯ ಸೇರುತ್ತಾರೆ, ಬಿಜೆಪಿಗೆ ಬರ್ತಾರೆ, ಅಣ್ಣಾಮಲೈ ಬಳಿ ರಾಜೀನಾಮೆ ಕೊಡಿಸಿದ್ದೇ ಮೋದಿ ಎಂಬ ಸುದ್ದಿಎಲ್ಲಾ ಹರಿದಾಡಿತ್ತು. ಈಗ ಈ ಎಲ್ಲಾ ಚರ್ಚೆಗಳಿಗೆ ವಿರಾಮ ಸಿಕ್ಕಿದ್ದು ಅಣ್ಣಾಮಲೈ ಇಂದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

ಅಣ್ಣಾಮಲೈ 1984 ಜೂನ್ 4ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಜನಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಜೊತೆಗೆ ಎಂಬಿಎ ಪದವಿಯನ್ನೂ ಅಣ್ಣಾಮಲೈ ಪಡೆದಿದ್ದಾರೆ. ಬಳಿಕ ಒಂದೇ ಬಾರಿಗೆ ಐಪಿಎಸ್ ಪರೀಕ್ಷೆ ಬರೆದು 2011ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಆಗಿದ್ದರು. ಮೊದಲಿಗೆ ಉತ್ತರ ಕನ್ನಡ ಜಿಲ್ಲೆಯ ಕಾರ್ಕಳ ಉಪ ವಿಭಾಗದ ಎಎಸ್ಪಿಯಾಗಿ ವೃತ್ತಿ ಆರಂಭಿಸಿದ ಅಣ್ಣಾಮಲೈ. 2013ರಲ್ಲಿ ಉಡುಪಿ ಎಸ್ಪಿ, ನಂತರ ಚಿಕ್ಕಮಗಳೂರು ಎಸ್ಪಿ ಆಗಿ ಸೇವೆ ಸಲ್ಲಿಸಿದ್ದರು. 2018ರ ಅಕ್ಟೋಬರ್ 17ರಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಅಧಿಕಾರ ಸ್ವೀಕಾರಿಸಿ ಲೋಕಸಭೆ ಚುನಾವಣೆ ಬಳಿಕ ಐಪಿಎಸ್ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದರು.