ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಕರೋನಾ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದಲೇ ಮೆಚ್ಚುಗೆ ಪಡೆದಿತ್ತು. ಬೆಂಗಳೂರಿನಲ್ಲಿ ಕರೋನಾ ನಿಗ್ರಹಕ್ಕೆ ತೆಗೆದುಕೊಂಡ ಕ್ರಮ ಇಡೀ ದೇಶಕ್ಕೆ ಮಾದರಿ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದ್ರೆ ಒಂದೇ ತಿಂಗಳಿನಲ್ಲಿ ಬೆಂಗಳೂರಿನ ಚಿತ್ರಣ ಬದಲಾಗಿದೆ. ರಾಜ್ಯ ರಾಜಧಾನಿಯಲ್ಲಿ ಕರೋನಾ ಎಲ್ಲೆ ಮೀರಿದ್ದು ಸಾವಿರದ ಗಡಿ ದಾಟಿದೆ. ಇದೇವೇಳೆ ಕರೋನಾ ವಿಚಾರದಲ್ಲಿ ಪಾಲಿಕೆ ಗೈಗೊಂಡ ಕ್ರಮದ ನಿಜಬಣ್ಣವೂ ಬಯಲಾಗಿದೆ. ಬೆಂಗಳೂರಿನಲ್ಲಿ ಈಗಲೇ ಕರೋನಾ ಹಾಸಿಗೆಗಳ ಕೊರತೆ ಎದ್ದು ಕಾಣ್ತಿದೆ. ಚಿಕ್ಕಪೇಟೆ ಸೇರಿ ಹಲವೆಡೆ ಕಳೆದ ನಾಲ್ಕು ದಿನಗಳಲ್ಲಿ ಪಾಸಿಟಿವ್ ಬಂದು ಹತ್ತಾರು ಕೇಸ್ ಗಳನ್ನ ಇನ್ನೂ ಐಸೋಲೇಷನ್ ವಾರ್ಡ್ ಗೆ ಶಿಫ್ಟ್ ಮಾಡಲು ಪಾಲಿಕೆ ಹಾಗೂ ಆರೋಗ್ಯ ಇಲಾಖೆ ವಿಫಲವಾಗಿದೆ. ನಗರದಲ್ಲಿ ಕೋವಿಡ್ 19ಗೆ ಎಂದೇ ಮೀಸಲಿರಿಸಿದ್ದ ಅತಿದೊಡ್ಡ ಆಸ್ಪತ್ರೆಯಾದ ವಿಕ್ಟೋರಿಯಾ ಸಂಪೂರ್ಣ ಭರ್ತಿಯಾಗಿದೆ. ಜೊತೆಗೆ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯೂ ಕೋವಿಡ್ ರೋಗಿಗಳಿಂದ ತುಂಬಿಹೋಗಿದೆ. ಹೀಗಾಗಿ ನಗರದಲ್ಲಿ ಕೊರೋನಾ ಸೋಂಕಿತರಿಗೆ ಹಾಸಿಗೆಗಳಿಲ್ಲದೇ ಪರದಾಡೋ ಸ್ಥಿತಿ ನಿರ್ಮಾಣವಾಗಿದೆ.

1 ಕೋಟಿ 30 ಲಕ್ಷ ಮಂದಿಗಿರೋದು 1130 ಹಾಸಿಗೆಗಳು ಮಾತ್ರ!
ಇನ್ನು ನಗರದಲ್ಲಿ 16 ಆಸ್ಪತ್ರೆಗಳಲ್ಲಿ 1130 ಹಾಸಿಗೆಗಳನ್ನ ಕೋವಿಡ್ 19 ರೋಗಿಗಳಿಗಾಗಿ ಮೀಸಲಿರಿಸಲಾಗಿದೆ. ಇದು ನಗರದ 1 ಕೋಟಿ 30 ಲಕ್ಷ ಮಂದಿಗೆ ಯಾವ ಮೂಲೆಗೂ ಸಾಕಾಗೋದಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಇನ್ನು ನಗರದಲ್ಲಿ ಕಮ್ಯುನಿಟಿ ಲೆವೆಲ್ಗೆ ಕರೋನಾ ಸ್ಪ್ರೆಡ್ ಆಗಿದ್ದು ಕೆಲವೇ ಕೆಲವು ದಿನಗಳಲ್ಲಿ ಬೆಂಗಳೂರಿನ ಸೋಂಕಿತರ ಸಂಖ್ಯೆ 10 ಸಾವಿರದ ಗಡಿದಾಟುವ ಸಾಧ್ಯತೆ ಇದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಆತಂಕಕಾರಿ ವಿಷಯ ಬಹಿರಂಗಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ಬೆಂಗಳೂರಿಗರಿಗೆ ತೀರಾ ಆತಂಕ ತರಿಸಿದೆ.

ಇನ್ನು ಬೆಂಗಳೂರಿನಲ್ಲಿ ಸಾವಿನ ದರ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ. ಸೋಂಕು ಪತ್ತೆ ವಿಳಂಬ ಮತ್ತು ಸೋಂಕಿತರಿಗೆ ಚಿಕಿತ್ಸೆಯೂ ವಿಳಂಬವಾಗ್ತಿರೋದ್ರಿಂದ ಸಾವಿನ ದರ ಏರಿಕೆಯಾಗ್ತಿದೆ ಎಂಬುದನ್ನ ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಬೆಂಗಳೂರಿನ ಮರಣ ಪ್ರಮಾಣ ಶೇಕಡಾ 5.1 ರಷ್ಟಿದೆ. ಮುಂಬೈನಲ್ಲಿ ಸೇಕಡಾ 5.2 ರಷ್ಟಿದ್ದು ಚೆನ್ನೈನಲ್ಲಿ ಇದು ಶೇಕಡಾ 1.5 ರಷ್ಟಿದೆ. ಆಘಾತಕಾರಿ ವಿಷ್ಯ ಏನಂದ್ರೆ ಜಾಗತಿಕ ಮರಣ ಪ್ರಮಾಣ ಶೇಕಡಾ 5.2 ರಷ್ಟಿದ್ರೆ, ದೇಶದ ಕೊರೋನಾ ಸೋಂಕಿತರ ಮರಣ ಪ್ರಮಾಣ ಕೇವಲ 3.2 ರಷ್ಟಿದೆ. ಹೀಗಾಗಿ ಬೆಂಗಳೂರಿನ ಮರಣ ಪ್ರಮಾಣ ಶೇಕಡಾ 5.1 ಇರೋಮೂಲಕ ದೇಶದ ಕೊರೋನಾ ಮರಣ ಪ್ರಮಾಣಕ್ಕಿಂದ ಹೆಚ್ಚಿದೆ.