ಬೆಂಗಳೂರು: ದಯವಿಟ್ಟು ರಾಜಧಾನಿ ಬೆಂಗಳೂರನ್ನು ಬಿಡಬೇಡಿ. ಬೆಂಗಳೂರು ಬಿಟ್ಟು ತೆರಳಬೇಡಿ ಅಂತ ರಾಜ್ಯ ಸರ್ಕಾರದ ಮುಖ್ಯಮಂತ್ರಿ, ಸಚಿವರುಗಳು ಜನರಿಗೆ ಮನವಿಯನ್ನು ಮಾಡುತ್ತಲೇ ಇದ್ದಾರೆ. ಇದರ ಜೊತೆ ಜೊತೆಗೆ ಬೆಂಗಳೂರು ಬಿಡುವವರಿಗೆ ಎಲ್ಲಾ ಸೌಲಭ್ಯವನ್ನೂ ಕೊಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಬೆಂಗಳೂರಿನಿಂದ ತೆರಳುವವರಿಗೆ ಹೆಚ್ಚುವರಿ ಬಸ್
1600 ಹೆಚ್ಚುವರಿ ಬಸ್ ಘೋಷಿಸಿದ ಸಚಿವ ಸವದಿ
ಬೆಂಗಳೂರಿನಲ್ಲಿ ಲಾಕ್ ಡೌನ್ ವಿಧಿಸಲಾಗುತ್ತಿರುವುದರಿಂದ ಬೆಂಗಳೂರಿನಿಂದ ಇತರ ಕಡೆಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಇಂದು (ಸೋಮವಾರ) ಮತ್ತು ನಾಳೆ (ಮಂಗಳವಾರ) ಪ್ರತಿದಿನ 800 ಹೆಚ್ಚುವರಿ ಬಸ್ಸುಗಳನ್ನು ಅಂದರೆ ಒಟ್ಟು 1600 ಬಸ್ಸುಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಕಾರ್ಯಾಚರಣೆಗೊಳಿಸಲಾಗುತ್ತಿದೆ. ಇದಲ್ಲದೇ ಅಗತ್ಯವಿದ್ದರೆ ಮತ್ತಷ್ಟು (200) ಬಸ್ಸುಗಳನ್ನು ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗಿದೆ, ಎಂದು ಸವದಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನದ ವೇಳೆಗಾಗಲೇ 440 ಬಸ್ ಗಳು ವಿವಿಧ ಜಿಲ್ಲೆಗಳಿಗೆ ಪ್ರಯಾಣ ಆರಂಭಿಸಿಯಾಗಿತ್ತು. 11466 ಪ್ರಯಾಣಿಕರು ಕೂಡ ಪ್ರಯಾಣಿಸಿದ್ದಾರೆ. ಕೋವಿಡ್ 19 ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಜೊತೆಗೆ ಪ್ರಯಾಣಿಕರ ಹಿತದೃಷ್ಟಿಯಿಂದ ಇತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸವದಿ ಪ್ರಕಟಣೆಯಲ್ಲಿ ಹೇಳಿದ್ದಾರೆ.