ಬೆಂಗಳೂರು: ಒಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಧರ್ಮ ವಿರೋಧಿ ಬರಹವಿತ್ತು ಎನ್ನಲಾದ ವಿಚಾರಕ್ಕೆ ಸಂಬಂಧ ಪಟ್ಟಂತೆ ಬೆಂಗಳೂರಿನಲ್ಲಿ ನಡೆದ ಘಟನೆಯಲ್ಲಿ ಮೂವರು ಬಲಿಯಾಗಿದ್ದಾರೆ ಹಾಗೂ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮುಜಾಮಿಲ್ ಪಾಶಾ ಎನ್ನಲಾಗಿದ್ದು,ಆತನನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಅಲ್ಲದೇ, ಈಗಾಗ್ಲೆ 30ಕ್ಕೂ ಹೆಚ್ಚು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

ಆಗಸ್ಟ್ 11 ಮಂಗಳವಾರ ರಾತ್ರಿ 9ಗಂಟೆ ಸುಮಾರಿಗೆ ಬೆಂಗಳೂರಿನ ಕಾವಲ್ ಬೈರಸಂದ್ರ, ಪುಲಕೇಶಿ ನಗರ ಹಾಗೂ ಕೆಜಿ ಹಳ್ಳಿಯಲ್ಲಿ ದಾಂಧಲೆ ಶುರುವಾಗಿದೆ. ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮನೆಯ ಮುಂದೆ ಸೇರಿದ ಉದ್ರಿಕ್ತರ ಗುಂಪು ದಾಂಧಲೆಯನ್ನೇ ಆರಂಭಿಸಿತು.ಶಾಸಕರ ಆಪ್ತನೊಬ್ಬ ಫೇಸ್ ಬುಕ್ ಪೋಸ್ಟ್ ಮಾಡಿದ್ದು ಎನ್ನಲಾಗಿದ್ದು, ಅಷ್ಟಕ್ಕೆ ಉದ್ರಿಕ್ತರ ಗುಂಪು ಸಾವಿರಾರು ಸಂಖ್ಯೆಯಲ್ಲಿ ಸೇರಿ ಶಾಂತಿ ಕದಡಿತು.
ರಾಕ್ಷಸರಂತೆ ವರ್ತಿಸಿದ ದುಷ್ಕರ್ಮಿಗಳು!
ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ
ಪೊಲೀಸ್ ವಾಹನ ಪುಡಿ ಪುಡಿ, ಪಲ್ಟಿ
ಏಕಾಏಕಿ ಗುಂಪು ಗೂಡಿದ ಪುಂಡರು ತಮ್ಮ ತಾಳ್ಮೆ ಕಳೆದಕೊಂಡಿದ್ದರು. ಕರೊನಾದ ಜಾಗೃತಿಯನ್ನು ಮರೆತು ಸಾವಿರಾರು ಸಂಖ್ಯೆಯಲ್ಲಿ ಶಾಸಕರ ಮನೆ ಮುಂದೆ ಹಾಗೂ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ಜನ ರಾಕ್ಷಸರಂತೆ ವರ್ತಿಸಿದ್ರು.
ಸಿಕ್ಕ ಸಿಕ್ಕ ವಾಹನಗಳನ್ನು ಪುಡಿ ಮಾಡಿ ಬೆಂಕಿ ಹಚ್ಚಿದ್ರು, ಶಾಸಕರ ಮನೆಗೂ ಬೆಂಕಿ ಹಚ್ಚಿದ್ರು. ಪೋಸ್ಟ್ ಮಾಡಿದ್ದಾನೆ ಎನ್ನಲಾದ ವ್ಯಕ್ತಿಯ ಮನೆಗೂ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಇಷ್ಟೇ ಅಲ್ಲದೇ, ಪೊಲೀಸರ ಮೇಲೂ ದಾಳಿ ನಡೆಸಿದ ಪುಂಡರು, ಡಿ ಜೆ ಹಳ್ಳಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಿಲ್ಲಿಸಿದ ಡಿಸಿಪಿ ವಾಹನವನ್ನೂ ಪುಡಿ ಮಾಡಿ ಪಲ್ಟಿ ಮಾಡಿದ್ದಾರೆ, ಅಲ್ಲದೇ ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದು ದ್ವಿಚಕ್ರ ವಾಹನಗಳನ್ನು ಪುಡಿಗಟ್ಟಿ ಬೆಂಕಿ ಹಚ್ಚಿದ್ದಾರೆ.

ಇಷ್ಟೇ ಅಲ್ಲದೇ, ಸಿ ಆರ್ ಪಿ ಎಫ್ ತುಕಡಿ ವಾಹನಗಳು, ಪೊಲೀಸ್ ಜೀಪ್ ಇತ್ಯಾದಿ ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ. ಕೆ ಜಿ ಹಳ್ಳಿ ಸುತ್ತಮುತ್ತಲಿನ ಜನರಿಗೆ ಹೀಗೆ ಏಕಾ ಏಕಿ ಶುರುವಾದ ಬೆಂಕಿ ಸಮರದಿಂದ ದಾರಿಕಾಣದಾಗಿದೆ. ಪೊಲೀಸರು ಕೂಡ ಪರಿಸ್ಥಿತಿಯನ್ನು ಹತೋಟಿಗೆ ತರಲು ಪರದಾಡಿದ್ರು.
ಪೊಲೀಸರ ಮೇಲೇಯೇ ಉದ್ರಿಕ್ತರು ದಾಳಿ ನಡೆಸಲು ಮುಂದಾದ್ರು. ಇದಾದ ನಂತರ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಥಳಕ್ಕೆ ಆಗಮಿಸಿದ್ರು. ದಾಂಧಲೆ ನಡೆಸಿದ ರಾಕ್ಷಸ ಸ್ವರೂಪಿ ವ್ಯಕ್ತಿಗಳು ಹಲವಾರು ಕೋಟಿ ರೂಪಾಯಿಯ ಆಸ್ತಿ ಪಾಸ್ತಿ ಧ್ವಂಸ ಮಾಡಿದ್ದಾರೆ.
ಶಾಂತಿ ಕಾಪಾಡುವಂತೆ ಅಖಂಡ ಶ್ರೀನಿವಾಸ ಮೂರ್ತಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗ್ತಿದೆ.