ನವದೆಹಲಿ: ಭಾರತ ದೇಶದಲ್ಲಿ ಕೋವಿಡ್ 19 ಸಮುದಾಯ ಪ್ರಸರಣ ಹಂತ ತಲುಪಿಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ( ಐಸಿಎಂಆರ್ ) ಸ್ಪಷ್ಟಪಡಿಸಿದೆ. ಐಸಿಎಂಆರ್ ನ ಪ್ರಧಾನ ನಿರ್ದೇಶಕ ಡಾ,ಭಲರಾಮ ಭಾರ್ಗವ್ ದೆಹಲಿಯಲ್ಲಿ ಇಂದು ಈ ವಿಚಾರ ತಿಳಿಸಿದ್ದಾರೆ. ಭಾರತ ಭೌಗೋಳಿಕವಾಗಿ ಹಾಗೂ ಜನಸಂಖ್ಯೆಯಲ್ಲೂ ಬಹುದೊಡ್ಡ ರಾಷ್ಟ್ರವಾಗಿದೆ. ಆದರೆ ಇಲ್ಲಿ ಕರೋನಾ ಹರಡುವಿಕೆಯ ಪ್ರಮಾಣ ಬಹಳಷ್ಟು ಕಡಿಮೆ ಇದೆ. ಐಸಿಎಂಆರ್ ಅಧ್ಯಯನದ ಪ್ರಕಾರ ಸಣ್ಣ ಜಿಲ್ಲೆಗಳಲ್ಲಿ ಹರಡುವಿಕೆಯ ಮಟ್ಟ ಶೇಕಡ 1 ಕ್ಕಿಂತ ಕಡಿಮೆ ಇದೆ. ನಗರ ಪ್ರದೇಶದಲ್ಲಿ ಹರಡುವಿಕೆಯ ಪ್ರಮಾಣ ಶೇಕಡ 1 ಕ್ಕಿಂತ ಹೆಚ್ಚಿದೆ. ಹಾಗೂ ಕಂಟೈನ್ಮೆಂಟ್ ಝೋನ್ ಗಳಲ್ಲಿ ಕೊರೋನಾ ಹರಡುವಿಕೆ ಪ್ರಮಾಣ ಕೊಂಚ ಹೆಚ್ಚಿರಬಹುದು, ಆದರೆ ಭಾರತ ದೇಶದಲ್ಲಿ ಕೋವಿಡ್ 19 ಸಮುದಾಯ ಪ್ರಸರಣ ಇಲ್ಲ ಎಂದು ಡಾ. ಭಾರ್ಗವ್ ಹೇಳಿದ್ದಾರೆ.

ಇನ್ನು ಇದೇವೇಳೆ ದೇಶದಲ್ಲಿ ಲಾಕ್ಡೌನ್ ನಿಯಮ ಹಾಗೂ ಕಂಟೈನ್ಮೆಂಟ್ ನಿಯಮ ಜೊತೆಗೆ ಕರೋನಾ ಟ್ರೇಸಿಂಗ್ ಮತ್ತು ಟೆಸ್ಟಿಂಗ್ ಪದ್ದತಿಯನ್ನ ಹೀಗೆ ಮುಂದುವರೆಸುವ ಅನಿವಾರ್ಯತೆ ಇದೆ ಎಂದು ಡಾ. ಭಾರ್ಗವ್ ಅಭಿಪ್ರಾಯಪಟ್ಟಿದ್ದಾರೆ. ನಿನ್ನೆಯ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಪ್ರತಿದಿನ 1.51 ಲಕ್ಷ ಕೊರೋನಾ ಟೆಸ್ಟ್ ಮಾಡಲಾಗುತ್ತಿದೆ. ಇನ್ನು ಪ್ರತಿನಿತ್ಯ 2 ಲಕ್ಷ ಮಂದಿಗೆ ಕರೋನಾ ಟೆಸ್ಟ್ ಮಾಡುವ ಸಾಮರ್ಥ್ಯ ಹೊಂದಿದ್ದೇವೆ ಎಂದು ಡಾ. ಭಾರ್ಗವ ತಿಳಿಸಿದ್ದಾರೆ. ಇನ್ನು ದೇಶದಲ್ಲಿ 1 ಲಕ್ಷದ 37 ಸಾವಿರದ 448 ಆ್ಯಕ್ಟೀವ್ ಕೇಸ್ ಇದ್ದು, 1 ಲಕ್ಷದ 41 ಸಾವಿರದ 28 ಮಂದಿ ಕರೋನಾ ಗೆದ್ದಿದ್ದಾರೆ. ದೇಶದಲ್ಲಿ ಕರೋನಾಗೆ ಬಲಿಯಾದವರ ಸಂಖ್ಯೆ 8 ಸಾವಿರದ 102ಕ್ಕೆ ತಲುಪಿದೆ.