ದೆಹಲಿ: ಮಂಗಳಗ್ರಹದ ಅಧ್ಯಯನಕ್ಕಾಗಿ ಅಮೆರಿಕ, ಯುರೋಪ್ ಒಕ್ಕೂಟ ಹಾಗೂ ಭಾರತ ಸೇರಿ ಅನೇಕ ರಾಷ್ಟ್ರಗಳು ಪ್ರಯತ್ನ ಮುಂದುವರೆಸಿವೆ. ಇದರ ನಡುವೆ ಮಂಗಳ ಗ್ರಹದ ಮೇಲೆ ನೀರಿನ ಕುರುಹು ಪತ್ತೆಯಾಗಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ.
ಮಂಗಳ ಗ್ರಹದ ಮೇಲೆ ಬೃಹತ್ ಮಂಜುಗಡ್ಡೆಯ ಕುಳಿ ಪತ್ತೆಯಾಗಿದೆ. ಅಂದಾಜು 82 ಕಿಲೋ ಮೀಟರ್ ಅಗಲವಾಗಿರುವ ಈ ಕುಳಿಯಲ್ಲಿ 1.8 ಕಿ.ಮೀ. ಆಳವಾದ ಮಂಜುಗಡ್ಡೆ ಇದೆ ಎಂದು ಅಂದಾಜಿಸಲಾಗಿದೆ. ಕೊರೊಲೇವ್ ಕುಳಿ ಎಂದು ಗುರುತಿಸಲಾಗುವ ಈ ಕುಳಿಯ ದೃಶ್ಯಗಳನ್ನು ತನ್ನ ಮಾರ್ಸ್ ಎಕ್ಸ್ಪ್ರೆಸ್ ರವಾನಿಸಿರುವುದಾಗಿ ಇಎಸ್ಎ ತಿಳಿಸಿದೆ.
ಮಂಜುಗಡ್ಡೆ ಮೇಲಿನ ಗಾಳಿ ತಣ್ಣಗಿದ್ದು, ಸುತ್ತಲಿನ ಗಾಳಿಗಿಂತಲೂ ಭಾರವಾಗಿದೆ. ಗಾಳಿಯು ಶಾಖನಿರೋಧಕ ಗುಣವನ್ನು ಹೊಂದಿರುವ ಕಾರಣ ಕುಳಿಯಲ್ಲಿರುವ ಮಂಜುಗಡ್ಡೆ ಕರಗದೆ ಹಾಗೆಯೇ ಗಟ್ಟಿಯಾಗಿ ಉಳಿದಿದೆ ಎಂದು ಇಎಸ್ಎ ತಿಳಿಸಿದೆ.