ಬೆಂಗಳೂರು: ನಟ ಚಿರಂಜೀವಿ ಸರ್ಜಾ ನಮ್ಮ ಜೊತೆ ಇಲ್ಲ ಎಂಬ ನೋವು ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.. ಚಿರಂಜೀವಿ ಸರ್ಜಾ ನಿಧನರಾದ ದಿನದಿಂದ ಇಲ್ಲಿಯವರೆಗೆ ಮಾತನಾಡದ ಪತ್ನಿ ಮೇಘನಾ ರಾಜ್, ಈಗ ಟ್ವೀಟ್ ಮೂಲಕ ಪತಿಗೆ ಭಾವನಾತ್ಮಕ ಸಂದೇಶವನ್ನು ಕಳುಹಿಸಿದ್ದಾರೆ..
ಪತಿ ಚಿರಂಜೀವಿ ಸರ್ಜಾರನ್ನು ನೆನೆದು ಭಾವನಾತ್ಮಕ ಪತ್ರ ಬರೆದಿರುವ ನಟಿ ಮೇಘನಾ, ನೀನು ಮತ್ತೆ ಮಗುವಾಗಿ ಹುಟ್ಟಿ ಬರೋದಕ್ಕೆ ಕಾಯುತ್ತಿದ್ದೇನೆ ಅಂತ ಹೇಳಿದ್ದಾರೆ..
ಕಣ್ಣೀರು ತರಿಸುತ್ತೆ ಚಿರುಗೆ ಮೇಘನಾ ಬರೆದ ಪತ್ರ..!
‘ಚಿರು, ಎಷ್ಟೇ ಬಾರಿ ಪ್ರಯತ್ನಿಸಿದರು ನನ್ನ ಮನದಾಳದ ಮಾತನ್ನು ಪದಗಳಲ್ಲಿ ವರ್ಣಿಸಲಾಗದ ಪರಿಸ್ಥಿತಿ ನನ್ನದು.. ನಿನ್ನ ಮೇಲಿನ ಪ್ರೀತಿ, ಹುಚ್ಚು, ವಿಶ್ವಾಸದ ಬಗ್ಗೆ ಮಾತನಾಡಲು ಶಬ್ಧಕೋಶದಲ್ಲಿ ಪದಗಳೇ ಸಾಲುತ್ತಿಲ್ಲ.. ನನ್ನ ಸ್ನೇಹಿತ, ನನ್ನ ಪ್ರೇಮಿ, ನನ್ನ ಹಿತೈಷಿ,ನನ್ನ ಮಗು, ನನ್ನ ಸರ್ವಸ್ವ, ನನ್ನ ಪತಿ.. ನೀನು ಇದೆಲ್ಲದ್ದಕ್ಕಿಂತ ಹೆಚ್ಚು ನೀನು ನನ್ನ ಆತ್ಮದ ಅರ್ಧ ಭಾಗ, ಚಿರು..
ಪ್ರತಿ ದಿನ ನಮ್ಮ ಮನೆಯ ಬಾಗಿಲು ನೋಡುತ್ತಾ ನಾ ಮನೆಗೆ ಬಂದೆ ಅಂತ ಹೇಳುತ್ತಾ ನೀನು ಬಂದೇ ಬಿಡುವೆ ಎಂಬ ಆಸೆ.. ನೀನು ಬರದಿದ್ದಾಗ ನನ್ನ ಆತ್ಮವನ್ನೇ ಸುಡುವಂತಹ ಒಂದು ನೋವು ನನ್ನಲ್ಲಿ..ಪ್ರತಿ ದಿನ ಪ್ರತಿ ಕ್ಷಣ ನಿನ್ನನ್ನು ಸ್ಪರ್ಶಿಸಲಾಗದೇ ನನ್ನ ಕಾಲ್ಕೆಳಗಿನ ಭೂಮಿ ಕುಸಿಯುವಂತೆ ಒಂದು ನಡುಕವಾಗುತ್ತೆ..
ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಲು ಮನಸಾಗಲಿಲ್ಲ ನಿನಗೆ.. ಹೋಗುತ್ತಾ ನಮ್ಮ ಪ್ರೀತಿಯ ಸಂಕೇತವಾಗಿ ಒಂದು ಪುಟ್ಟ ಹರುಷವನ್ನು ನನಗೆ ಕೊಟ್ಟು ಹೋಗಿದ್ದೀಯ.. ಈ ಕಾಣಿಕೆಗೆ ನಾನು ಚಿರರುಋಣಿ.. ನಮ್ಮ ಈ ಪುಟ್ಟ ಹರುಷವನ್ನು ಭೂಮಿಗೆ ತರಲು ಕಾತುರ ನನಗೆ.. ಮಗುವಾಗಿ ನಿನ್ನ ಮತ್ತೆ ಮುದ್ದಿಸುವ ಕಾತುರ, ನಿನ್ನ ಚಿರುನಗೆಯ ನೋಡುವ ಕಾತುರ.. ನೀನು ಮತ್ತೆ ಬರುವ ವೇಳೆಗಾಗಿ ನಾನು ಕಾಯುವೆ.. ನೀನು ನನಗಾಗಿ ದಿಗಂತದ ಆ ಬದಿಯಲ್ಲಿ ಕಾಯುತ್ತಿರು..