ತಿರುಮಲ: ಭೂ ವೈಕುಂಠ ತಿರುಪತಿ ತಿಮ್ಮಪ್ಪನ ಸನ್ನಿಧಿ ಬರೋಬಬ್ಬರಿ 83 ದಿನಗಳ ಬಳಿಕ ಬಾಗಿಲು ತೆರೆದಿದೆ. ಕರೋನಾ ಮಹಾಮಾರಿಯಿಂದಾಗಿ ದೇಶದಾದ್ಯಂತ ಮಾರ್ಚ್ 24 ರಿಂದ ಲಾಕ್ಡೌನ್ ಹೇರಲಾಗಿತ್ತು. ಈ ಹಿನ್ನಲೆಯಲ್ಲಿ ಎಲ್ಲಾ ದೇವಾಲಯಗಳು, ಧಾರ್ಮಿಕ ಕೇಂದ್ರಗಳನ್ನ ಸಾರ್ವಜನಿಕ ಹಿತದೃಷ್ಠಿಯಿಂದ ಮುಚ್ಚಲಾಗಿತ್ತು. ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಪ್ರತಿದಿನ ಲಕ್ಷಾಂತರ ಭಕ್ತಾಧಿಗಳು ದರ್ಶನಕ್ಕಾಗಿ ಆಗಮಿಸುತ್ತಾರೆ. ಸಾಮಾಜಿಕ ಅಂತರ ಹಾಗೂ ಸುರಕ್ಷತೆ ದೃಷ್ಠಿಯಿಂದ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಗೆ ಭಕ್ತಾದಿಗಳ ಪ್ರವೇಶ ನಿರ್ಬಂಧಿಸಲಾಗಿತ್ತು. ಸದ್ಯ ಕೇಂದ್ರ ಸರ್ಕಾರ ಜೂನ್ 8 ರಿಂದ ದೇಶಾದ್ಯಂತ ದೇವಾಲಯ ಹಾಗೂ ಧಾರ್ಮಿಕ ಕೇಂದ್ರಗಳನ್ನ ತೆರೆಯಲು ಹಾಗೂ ಜನರ ಪ್ರವೇಶಕ್ಕೆ ಅನುಮತಿ ನೀಡಿದ ಹಿನ್ನಲೆಯಲ್ಲಿ ಬರೊಬ್ಬರಿ 83 ದಿನಗಳ ಲಾಕ್ಡೌನ್ ನಂತರ ಭೂ ವೈಕುಂಠದ ದ್ವಾರ ಭಕ್ತರಿಗೆ ತೆರೆದಿದೆ.

ತಿಮ್ಮಪ್ಪನ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದರೂ ಕರೋನಾ ಗೈಡ್ಲೈನ್ ಪ್ರಕಾರ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸೋದು ಪ್ರತಿ ಭಕ್ತಾಧಿಗಳಿಗೂ ಕಡ್ಡಾಯವಾಗಿದೆ. ಇನ್ನು ನಿತ್ಯ 6 ಸಾವಿರ ಭಕ್ತರಿಗೆ ಮಾತ್ರ ದರುಶನದ ಅವಕಾಶ ಕಲ್ಪಿಸಲಾಗಿದೆ. ಕೇಂದ್ರದ ಮಾರ್ಗಸೂಚಿ ಪ್ರಕಾರ 65 ವರ್ಷ ಮೇಲ್ಪಟ್ಟ ಮತ್ತು 10 ವರ್ಷದೊಳಗಿನ ಮಕ್ಕಳಿಗೆ ದರುಶನದ ಅವಕಾಶ ಇಲ್ಲ. ಇನ್ನು ಆನ್ ಲೈನ್ ನಲ್ಲಿ 3 ಸಾವಿರ ಜನರಿಗೆ ಟಿಕೆಟ್ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದ್ದು ಇನ್ನುಳಿದ 3 ಸಾವಿರ ಟಿಕೆಟ್ ಗಳನ್ನ ದೇವಸ್ಥಾನದ ಅಲಿಪಿರಿ ಕೌಂಟರ್ ನಲ್ಲಿ ಕೊಡಲಾಗ್ತಿದೆ. ಇನ್ನು ಜೂನ್ 30ರ ವರೆಗಿನ ಎಲ್ಲಾ ಟಿಕೆಟ್ ಗಳು ಈಗಾಗಲೇ ಮಾರಾಟವಾಗಿದೆ ಎಂದು ಟಿಟಿಡಿ ಹೇಳಿದೆ.