ನವದೆಹಲಿ : ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಆರೋಗ್ಯ ಸ್ಥಿತಿ ಕ್ಷಣ ಕ್ಷಣಕ್ಕೂ ಗಂಭೀರವಾಗುತ್ತಲೇ ಇದೆ. ಸದ್ಯ ಪ್ರಣವ್ ಕೊರೋನಾದಿಂದ ಬಳಲುತ್ತಿದ್ದು ಜೊತೆಗೆ ಮೆದುಳಿನ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದಾರೆ. ದಿನದಿನಕ್ಕೂ ಪ್ರಣವ್ ಆರೋಗ್ಯ ಕ್ಷೀಣಿಸುತ್ತಿದ್ದು ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದಾರೆ.

ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಪ್ರಣವ್ ಮುಖರ್ಜಿ ಆಗಸ್ಟ್ 10ರಂದು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೇ ಸಮಯದಲ್ಲಿ ಪ್ರಣವ್ಗೆ ಕೋವಿಡ್ ಸೋಂಕು ಇರೋದು ದೃಢಪಟ್ಟಿತ್ತು. ಅಲ್ಲಿಂದ ಈಚೆಗೆ ಪ್ರಣವ್ ಆರೋಗ್ಯ ಕೊಂಚವೂ ಚೇತರಿಕೆ ಕಾಣ್ತಿಲ್ಲ. ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಪ್ರಣವ್ ಮುಖರ್ಜಿ ಅವರು ಆರೋಗ್ಯ ವಿಚಾರಿಸಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಣವ್ ಮುಖರ್ಜಿ ಪುತ್ರಿಯಾದ ಶರ್ಮಿಷ್ಟಾ ಮುಖರ್ಜಿಯವರಿಗೆ ಕರೆ ಮಾಡಿ ಪ್ರಣವ್ ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದ್ದಾರೆ.
ಮುಖರ್ಜಿಗೆ ಚಿಕಿತ್ಸೆ ನೀಡುತ್ತಿರೋ ದೆಹಲಿಯ ಸೇನಾ ರೆಫರಲ್ ಆಸ್ಪತ್ರೆ ವೈದ್ಯರ ತಂಡ ಮುಖರ್ಜಿ ಆರೋಗ್ಯ ಚೇತರಿಕೆ ಕಾಣ್ತಿಲ್ಲ ಎಂದು ಹೇಳಿದೆ. ಆರಂಭದಿಂದಲೂ ಪ್ರಣವ್ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ, ಸದ್ಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಪ್ರಣವ್ ಮುಖರ್ಜಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಇನ್ನು ಪ್ರಣವ್ ಮುಖರ್ಜಿ ಅರೋಗ್ಯ ಸ್ಥಿತಿ ಗಂಭೀರವಾಗ್ತಿದ್ದಂತೆ ದೇಶದ ವಿವಿಧ ಭಾಗಗಳಲ್ಲಿ ಮುಖರ್ಜಿ ಆರೋಗ್ಯ ಸುಧಾರಣೆಗಾಗಿ ದೇವರ ಪ್ರಾರ್ಥನೆ, ಹೋಮ ಹವನ ನೆಡಸಲಾಗ್ತಿದೆ. ಪಶ್ಚಿಮ ಬಂಗಾಳದ ಪ್ರಣವ್ ನಿವಾಸದಲ್ಲೂ ಇಂದು ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪ್ರಣವ್ ಶೀಘ್ರ ಗುಣಮುಖರಾಗಲಿ ಎಂದು ಅನೇಕ ಅಭಿಮಾನಿಗಳು ಹಾರೈಸಿದ್ದಾರೆ.