ಭಾರತೀಯ ಸೇನೆ ಎಂದಾಕ್ಷಣ ಏನೋ ರೋಮಾಂಚನ. ಗಡಿ ನುಸುಳುವ ವೈರಿಗಳ ಗುಂಡಿಗೆ ಎದೆಯೊಡ್ಡಿ ಪ್ರತಿದಾಳಿ ನಡೆಸುವ ಸೈನಿಕರನ್ನು ನೆನೆಯುತ್ತಲೇ ಮೈ ಜುಮ್ ಎನ್ನುತ್ತದೆ. ಅವನ ಕನಸೂ ಯೋಧನಾಗುವುದಾಗಿತ್ತು. ಸತತ ಪ್ರಯತ್ನದಿಂದ ಕೊನೆಗೂ ಕಂಡ ಕನಸು ನನಸಾಗುವ ಕಾಲ ಬಂದಿತ್ತು. ಎಲ್ಲಿಲ್ಲದ ಸಂಭ್ರಮ ಅವನದು, ಆಕೆ ಮಾತ್ರ ಮೌನಿ… ತನ್ನ ಮಗ ಬಿಟ್ಟು ಹೋಗುತ್ತಾನೆ ಎಂಬುದು ಆಕೆಗೆ ಆಘಾತಕಾರಿ ವಿಷಯ. ಆದರೂ ಉಮ್ಮಳಿಸಿ ಬರುತ್ತಿದ್ದ ಕಣ್ಣೀರು ಅವನ ಮುಂದೆ ಬತ್ತಿಹೋಯಿತು.
ಆತನದ್ದೋ ಗಟ್ಟಿ ಮನಸ್ಸು…ಅದೇ ಅವನಿಗೀಗ ಮೊದಲ ಪಾಠ. ಪೂರ್ಣ ಸಿದ್ಧತೆ ಮಾಡಿಕೊಂಡವನು ಗುರಿಯನ್ನು ಬೆನ್ನಟ್ಟಿ ಹೋದ. ಆತನಿಗೀಗ ದೇಶದ ರಕ್ಷಣೆಗಿಂತ ತನ್ನ ಆಸೆ, ಕನಸು, ಕುಟುಂಬ, ಬಂಧುವಗ೯ ಮಿಗಿಲಲ್ಲ. ಹೆಮ್ಮೆಯ ಗೆಳೆಯ ಅನಿಲ್ ಕುಮಾರ್ ಈಗ ಗುಜರಾತ್‌ನ ಗಡಿಯಲ್ಲಿ ದೇಶ ಕಾಯುತ್ತಿದ್ದಾನೆ. ಈತನಂತೇ ಭಾರತಾಂಬೆಯ ರಕ್ಷಣೆಯೊಂದೇ ಜವಾಬ್ದಾರಿಯೆಂದು ತಿಳಿದು, ಮರಳಿ ಬರುವ ಖಾತ್ರಿಯಿಲ್ಲದೆ ತೆರಳುವ ಈ ತ್ಯಾಗಮಯಿಗಳಿಗೆ ನನ್ನದೊಂದು ಸಲಾಂ…
ದಿವ್ಯಶ್ರೀ

ದ್ವಿತೀಯ ಬಿಎ (ಪತ್ರಿಕೋದ್ಯಮ)
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು