ಬೆಂಗಳೂರು: “ಕೋಲು ಮಂಡೆ ಜಂಗಮ ದೇವರು” ರ‍್ಯಾಪ್ ಸಾಂಗ್ ಬಗ್ಗೆ ವಿವಾದ ಕಿಡಿ ಹೊತ್ತಿಕೊಳ್ತಿದ್ದಂತೆ ರ‍್ಯಾಪರ್ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿ, ಜೊತೆಗೆ ಕ್ಷಮೆಯನ್ನೂ ಕೇಳಿ ಈ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.ಇದೇ ತಿಂಗಳ 22 ರಂದು ಯೂಟ್ಯೂಬ್‌ನಲ್ಲಿ ಕೋಲುಮಂಡೆ ಎಂಬ ಸಾಂಗ್ ಬಿಡುಗಡೆ ಮಾಡಿದ್ದೆ. ಈ ಸಾಂಗ್ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಯಾವುದೇ ವ್ಯಕ್ತಿ, ಜಾತಿ ಮತ್ತು ಧರ್ಮಕ್ಕೆ ಅವಮಾನ ಮಾಡಬೇಕೆಂಬ ಉದ್ದೇಶದಿಂದ ಈ ರ‍್ಯಾಪ್ ಸಾಂಗ್ ಮಾಡಿಲ್ಲ. ಒಳ್ಳೆಯ ಉದ್ದೇಶದಿಂದ ಹಾಡು ಮಡಲಾಗಿದೆ. ಸಾಹಿತ್ಯವನ್ನ ಮುಂದಿನ ಪೀಳಿಗೆಗೆ ಕೊಂಡೊಯ್ಯೋ ಉದ್ದೇಶದಿಂದ ಈ ಹಾಡು ಮಾಡಲಾಗಿದೆ. ಶಂಕಮ್ಮ ಪಾತ್ರಕ್ಕೆ ಯಾವುದೇ ರೀತಿಯಲ್ಲೂ ಅವಮಾನ ಮಾಡಿಲ್ಲ. ಯಾರೂ ತಪ್ಪು ಗ್ರಹಿಸಬೇಡಿ ಹಾಗೂ ಒಂದುವೇಳೆ ನಿಮಗೆ ನೋವಾಗಿದ್ದರೆ ನಮ್ಮ ತಂಡದ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

ಕಳೆದ 22 ರಂದು ಯೂಟ್ಯೂಬ್‌ನಲ್ಲಿ ಚಂದನ್ ಶೆಟ್ಟಿ ಈ ಸಾಂಗ್ ಬಿಡುಗಡೆಗೊಳಿಸಿದ್ರು. ಶಿವಶರಣೆ ಸಂಕಮ್ಮನ ಬಗ್ಗೆ ಅಶ್ಲೀಲ ಪ್ರದರ್ಶಿಸಲಾಗಿದೆ ಜೊತೆಗೆ ಭಕ್ತಿ ಗೀತೆಯನ್ನು ತಿರುಚಲಾಗಿದೆ. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅದ್ರಲ್ಲೂ ಚಾಮರಾಜ ನಗರದ ಜನತೆ ತೀವ್ರ ಆಕ್ರೋಶ ಹೊರಹಾಕಿದ್ದರು. ಈ ಬೆನ್ನಲ್ಲೇ ಚಂದನ್ ಶೆಟ್ಟಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.