ಬೆಂಗಳೂರು- ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಿದ್ದೆ ಮಾತ್ರೆಗಳನ್ನು ನುಂಗಿದ್ದು ಇವರನ್ನು ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಡರಾತ್ರಿ ಯಡಿಯೂರಪ್ಪನವರೂ ಕೂಡ ಆಸ್ಪತ್ರೆಗೆ ದೌಡಾಯಿಸಿ ಸಂತೋಷ್ ಕುಮಾರ್ ರವರ ಆರೋಗ್ಯದ ಬಗ್ಗೆ ವಿಚಾರಣೆ ನಡೆಸಿದ್ದರು.
ಎನ್ ಆರ್ ಸಂತೋಷ್ ಕುಮಾರ್ ಮನೆಯಲ್ಲಿ ತಮ್ಮ ಓದುವ ಕೊಠಡಿಯಲ್ಲಿ ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದಾಗ ಮನೆಯವರು ನೋಡಿದ್ದಾರೆ. ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಆತ್ಮಹತ್ಯೆಗೆ ಕಾರಣವೇನು ಸಂತೋಷ್ ಯಾರು?
ಎನ್ ಆರ್ ಸಂತೋಷ್ ಕುಮಾರ್ ಆತ್ಮಹತ್ಯೆಗೆ ಕಾರಣ ಇನ್ನೂ ಕೂಡ ತಿಳಿದುಬಂದಿಲ್ಲ. ಆದರೆ ರಾಜಕೀಯವಾಗಿ ಒಂದಷ್ಟು ಏರಿಳಿತಗಳನ್ನು ಸಂತೋಷ್ ಕುಮಾರ್ ಕಂಡಿದ್ದರು. ಯಡಿಯೂರಪ್ಪನವರೊಂದಿಗೆ ಕೆಜೆಪಿ ಪಕ್ಷ ಕಟ್ಟುವುದಕ್ಕಿಂತ ಮೊದಲೇ ಸಂತೋಷ್ ಆಪ್ತರಾಗಿದ್ದರು.
ಯುವ ಮೋರ್ಚಾದಲ್ಲಿ ಗುರುತಿಸಿಕೊಂಡು, ನಂತರ ಯಡಿಯೂರಪ್ಪನವರನ್ನು ಸಿಎಂ ಮಾಡಲೇಬೇಕೆಂದು ಪಣಕ್ಕೆ ನಿಂತು ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಕೆಡವಲು ನೆರವಾದವರಲ್ಲಿ ಸಂತೋಷ್ ಕೂಡ ಒಬ್ಬರಾಗಿದ್ರು.
ಶಾಸಕರನ್ನು ಹೆಚ್ ಎ ಎಲ್ ಏರ್ ಪೋರ್ಟ್ ಗೆ ಕರೆದುಕೊಂಡು ಹೋಗುವ ವೇಳೆ ಮಾಧ್ಯಮಗಳ ಕ್ಯಾಮರಾದಲ್ಲಿ ಸಂತೋಷ್ ಸೆರೆಯಾಗಿದ್ರು. ಅಲ್ಲದೇ, ಏರ್ ಪೋರ್ಟ್ ನಲ್ಲಿ ಸಂತೋಷ್ ರನ್ನು ಮಾತನಾಡಿಸಲು ಮುಂದಾದಾಗ ಓಡಿ ಕಾರಿನಲ್ಲಿ ಕುಳಿತು ಪಲಾಯನ ಮಾಡಿದ್ದರು.
ಯಡಿಯೂರಪ್ಪನವರು ಮುಖ್ಯಮಂತ್ರಿಗಳಾದ ಕೆಲವೇ ದಿನಗಳಲ್ಲಿ ಸಂತೋಷ್ ರನ್ನು ದೂರವಿಡಲಾಗಿತ್ತು. ಕೆಲ ತಿಂಗಳ ನಂತರ ಮುಖ್ಯಮಂತ್ರಿಗಳೇ ಕರೆದು ರಾಜಕೀಯ ಕಾರ್ಯದರ್ಶಿ ಸ್ಥಾನವನ್ನು ನೀಡಿದ್ದರು.
ನೆನಪಿದೆಯಾ ಸಂತೋಷ್-ವಿನಯ್ ಫೈಟ್?
ಬಿಎಸ್ ಯಡಿಯೂರಪ್ಪ ಆಪ್ತ ಸಂತೋಷ್ ಮತ್ತು ಈಶ್ವರಪ್ಪ ಆಪ್ತ ವಿನಯ್ ನಡುವಿನ ಜಗಳ ತಾರಕಕ್ಕೇರಿತ್ತು. ವಿನಯ್ ರನ್ನು ಕಿಡ್ನಾಪ್ ಮಾಡಲು ಯತ್ನಿಸಲಾಗಿದೆ ಅಂತನೂ ಆರೋಪಿಸಿದ್ರು. ಸಂತೋಷ್ ಸುಪಾರಿ ನೀಡಿದ್ದಾರೆ ಅಂತನೂ ವಿನಯ್ ಸ್ಟೇಷನ್ ಮೆಟ್ಟಿಲೇರಿದ್ರು. ಈ ಗಲಾಟೆಯಿಂದಲೇ ಸಂತೋಷ್ ಮತ್ತು ವಿನಯ್ ರಾಜ್ಯಕ್ಕೆ ಪರಿಚಿತರಾಗಿದ್ದರು.
ಈಗ ಏಕಾಏಕಿ ಸಂತೋಷ್ ಕುಮಾರ್ ಆತ್ಮಹತ್ಯೆಗೆ ಯತ್ನಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.