ಲಡಾಕ್- ಭಾರತ ಮತ್ತು ಚೀನಾದ ನಡುವಿನ ಜಟಾಪಟಿ ನಡೆದು, ನಮ್ಮ ಸೈನಿಕರು ಹುತಾತ್ಮರಾದ ನಂತರ ಲೇಹ್ ಪ್ರದೇಶಕ್ಕೆ ಪ್ರಧಾನಿ ಭೇಟಿ ಕೊಟ್ಟು, ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. ಅದಾದ ನಂತರ ಸೈನಿಕರ ಆಸ್ಪತ್ರೆಗೂ ತೆರಳಿ, ಗಾಯಗೊಂಡಿರುವ ಸೈನಿಕರನ್ನು ಭೇಟಿಯಾಗಿ ಮಾತನಾಡಿಸಿದರು. ಸೈನಿಕರ ಆಸ್ಪತ್ರೆಗೆ ಭೇಟಿಯಾದಾಗ ತೆಗೆದ ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲೀಗ ಬಹುದೊಡ್ಡ ಚರ್ಚೆಗೆ ಕಾರಣವಾಗಿದೆ.
ಮೋದಿ ಭೇಟಿಗಾಗಿ ಸೆಮಿನಾರ್ ಹಾಲ್ ಆಸ್ಪತ್ರೆ ಆಯ್ತಾ?
ನರೇಂದ್ರ ಮೋದಿಯ ಭೇಟಿಗಾಗಿಯೇ ಸೆಮಿನಾರ್ ಹಾಲ್ (ಆಡಿಯೋ ವೀಡಿಯೋ ಹಾಲ್) ನ್ನು ಸೈನಿಕರ ಆಸ್ಪತ್ರೆಯಂತೆ ಬದಲಾಯಿಸಲಾಗಿದೆ ಅಂತ ಕಾಂಗ್ರೆಸ್,ಸೇರಿದಂತೆ ಹಲವಾರು ಮಂದಿ ಸಾಮಾಜಿಕ ಜಾಲ ತಾಣದಲ್ಲಿ ಪ್ರಧಾನಿ ಮೋದಿಯನ್ನು ವಿರೋಧಿಸಿದರು. ಇದಕ್ಕೆ ಈಗ ರಕ್ಷಣಾ ಇಲಾಖೆಯೇ ಉತ್ತರವನ್ನು ನೀಡಿದೆ. ಅದಕ್ಕಿಂತ ಮೊದಲು ಪ್ರಧಾನಿಯವರ ಆಸ್ಪತ್ರೆ ಭೇಟಿಯ ಕುರಿತಾಗಿ ಟ್ರೋಲ್ ಮಾಡುತ್ತಿರುವವರ ಪ್ರಶ್ನೆಗಳಿಗೆ ಉತ್ತರ ತುಂಬಾನೇ ಬೇಗ ಸಿಕ್ಕಿದೆ.
ಮೋದಿ ಭೇಟಿಯ ಬಗೆಗಿನ ಅನುಮಾನ 1- ಪ್ರಧಾನಿ ಮೋದಿಯ ಭೇಟಿಯ ಫೋಟೋಗಾಗಿ ಸೆಮಿನಾರ್ ಹಾಲ್ ನ್ನು ಆಸ್ಪತ್ರೆಯಂತೆ ಪರಿವರ್ತಿಸಲಾಗಿದೆ.
ನಿಜವೇನು- ಸೇನೆಯ ಆಸ್ಪತ್ರೆಯ ಸೆಮಿನಾರ್ ಹಾಲ್ ನದ್ದೆ ಫೋಟೋ ಇದಾಗಿದೆ. ಆದರೆ ಇದು ಮೋದಿ ಭೇಟಿಗಾಗಿ ಪರಿವರ್ತನೆ ಮಾಡಿದ್ದಂತೂ ಅಲ್ಲವೇ ಅಲ್ಲ. ಗಲ್ವಾನ್ ನಲ್ಲಿ ಗಾಯಗೊಂಡ ಸೈನಿಕರು ಇಲ್ಲಿ ಇರುವುದು ಕೂಡ ನಿಜವಾಗಿದೆ. ಅಲ್ಲದೇ, ಸೆಮಿನಾರ್ ಹಾಲ್ ನ್ನು ಸೈನಿಕರ ಚಿಕಿತ್ಸೆಗಾಗಿ ಬಳಕೆ ಮಾಡಲಾಗುತ್ತಿದೆ.
ಸೆಮಿನಾರ್ ಹಾಲ್ ಬಳಕೆಗೆ ಕಾರಣವೇನು?
ಕೊರೊನಾದ ಹಾವಳಿ ಲೇಹ್ ಲಡಾಕ್ ನಲ್ಲೂ ಕೂಡ ಇದೆ. ಸೈನಿಕರ ಆಸ್ಪತ್ರೆಯಲ್ಲಿರುವ ಕೆಲವು ಪ್ರಮುಖ ವಾರ್ಡ್ ಗಳನ್ನು ಕೊರೊನಾದ ಚಿಕಿತ್ಸೆಗಾಗಿ ಮತ್ತು ಐಸೋಲೇಷನ್ ಗಾಗಿ ಮೀಸಲಿಡಲಾಗಿದೆ. ಆದುದರಿಂದಲೇ ಸೆಮಿನಾರ್ ಹಾಲ್ ಅನ್ನು ಆಸ್ಪತ್ರೆಯಂತೆ ಬಳಕೆ ಮಾಡಲಾಗುತ್ತಿದೆ.

ಮೋದಿ ಭೇಟಿಯ ಬಗೆಗಿನ ಅನುಮಾನ 2- ಪ್ರಧಾನಿ ಮೋದಿಗಿಂತ ಮೊದಲು ಯಾಕೆ ಇದು ಜನರಿಗೆ ಗೊತ್ತಾಗಲಿಲ್ಲ?
ನಿಜವೇನು- ಮೋದಿ ಭೇಟಿಗಿಂತ ಮೊದಲೇ ಸೆಮಿನಾರ್ ಹಾಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈನಿಕರನ್ನು ಭಾರತೀಯ ಸೇನೆಯ ಮುಖ್ಯಸ್ಥ ಎಂ ಎಂ ನರವಾನೆ ಭೇಟಿಯಾಗಿ, ಆರೋಗ್ಯ ವಿಚಾರಿಸಿದ್ದರು. ಜೂನ್ 23ರಂದೇ ನರವಾನೆ ಭೇಟಿಯಾಗಿ ಸೈನಿಕರನ್ನು ಮಾತನಾಡಿಸಿದ್ದರು. ನರವಾನೆ ಭೇಟಿಯಾಗಿರುವ ಫೋಟೋ ಕೂಡ ಇದೆ.

ಮೋದಿ ಭೇಟಿಯ ಬಗೆಗಿನ ಅನುಮಾನ 3- ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸೈನಿಕರಲ್ಲಿ ಬ್ಯಾಂಡೇಜ್ ಕಾಣುತ್ತಿಲ್ಲ?ಅಲ್ಲಿ ಯಾಕೆ ಚಿಕಿತ್ಸಾ ಪರಿಕರಗಳು ಕಾಣುತ್ತಿಲ್ಲ!?
ನಿಜವೇನು- ಕೊರೊನಾದಿಂದಾಗಿ ಸೆಮಿನಾರ್ ಹಾಲನ್ನು ತಾತ್ಕಾಲಿಕವಾಗಿ ಆಸ್ಪತ್ರೆಯಂತೆ ಬದಲಾಯಿಸಲಾಗಿದೆ. ಇಲ್ಲಿ ದಾಖಲಾದವರಲ್ಲಿ ಬಹುತೇಕರು ಸಣ್ಣಪುಟ್ಟ ಗಾಯಗಳಾದವರು, ಮತ್ತು ಅವರಿಗೆ ಎದೆ, ಕಾಲು, ಭುಜ ಇತ್ಯಾದಿಗಳಿಗೆ ಗಾಯವಾಗಿದ್ದು, ಅವರು ತೊಟ್ಟಿರುವ ಬಟ್ಟೆಯಿಂದಾಗಿ ಯಾವುದೇ ಬ್ಯಾಂಡೇಜ್ ಕಾಣಿಸದೇ ಇರಬಹುದು.
ತೀವ್ರ ಗಾಯಗೊಂಡವರನ್ನು ವಿಶೇಷ ಚಿಕಿತ್ಸಾ ಕೊಠಡಿಯಲ್ಲಿ ದಾಖಲಿಸಲಾಗುತ್ತದೆ. ಮೂರು ವಾರಗಳಿಂದ ಇವರೆಲ್ಲ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಬಹುತೇಕರು ಗುಣಮುಖ ಹೊಂದುವ ಹಂತಕ್ಕೆ ಬಂದಿರುತ್ತಾರೆ.
ಮೋದಿ ಭೇಟಿಯ ಬಗೆಗಿನ ಅನುಮಾನ 4- ಆಸ್ಪತ್ರೆಯಲ್ಲಿ ಹದಿನೆಂಟು ಸೈನಿಕರು ದಾಖಲಾಗಿದ್ದಾರೆ ಅಂತ ಹೇಳಲಾಗುತ್ತಿದೆ, ಫೋಟೋದಲ್ಲಿ ಹೆಚ್ಚು ಕಾಣಿಸುತ್ತಾರೆ ಯಾಕೆ?
ನಿಜವೇನು- ಗಲ್ವಾನ್ ಗಲಾಟೆಯ ನಂತರ ಲೇಹ್ ನ ಆಸ್ಪತ್ರೆಗೆ 18 ಸೈನಿಕರನ್ನು ದಾಖಲಿಸಲಾಗಿದೆ ಅನ್ನುವ ವರದಿಯಾಗಿತ್ತು. ಆದರೆ ಮೋದಿಯವರು ಭೇಟಿ ನೀಡಿದಾಗಿನ ಫೋಟೋದಲ್ಲಿ ಹೆಚ್ಚಿನ ಸೈನಿಕರು ಕಾಣಿಸುತ್ತಾರೆ, ಯಾಕಂದ್ರೆ, ಇಲ್ಲಿ ಬೇರೇ ಬೇರೆ ಕಾರಣಗಳಿಗಾಗಿ ಅಡ್ಮೀಟ್ ಆದ ಸೈನಿಕರು ಕೂಡ ಇದ್ದಾರೆ. ಮೋದಿ ಭೇಟಿಯ ಸಂದರ್ಭದಲ್ಲಿ ಎಲ್ಲರೂ ಕೂಡ ಇದ್ದರು, ಮೋದಿ ಭೇಟಿಯಾಗುತ್ತಾರೆ ಅನ್ನುವ ಕಾರಣಕ್ಕೆ ಗಲ್ವಾನ್ ಗಲಾಟೆಯಲ್ಲಿ ಮಾತ್ರವೇ ಆಸ್ಪತ್ರೆಯಲ್ಲಿಟ್ಟು, ಉಳಿದವರನ್ನು ಸ್ಥಳಾಂತರಿಸುವ ಕೆಲಸ ಇಲ್ಲಿ ಆಗಿಲ್ಲ.
ಮೋದಿ ಭೇಟಿಯ ಬಗೆಗಿನ ಅನುಮಾನ 5-ಎಲ್ಲರೂ ಯಾಕೆ ಎದ್ದು ಕುಳಿತಿದ್ದರು, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಗಾಯಗೊಂಡ ಸೈನಿಕರನ್ನು ಭೇಟಿಯಾದಾಗಿನ ಫೋಟೋಗೂ, ಮೋದಿ ಭೇಟಿಯಾದಾಗ ಇದ್ದ ಫೋಟೋಗೂ ವ್ಯತ್ಯಾಸ ಯಾಕೆ?
ನಿಜವೇನು- ನರೇಂದ್ರ ಮೋದಿ ಭೇಟಿಯಾದಾಗ ಸೈನಿಕರೆಲ್ಲರನ್ನೂ ಎದ್ದು ಕುಳಿತುಕೊಳ್ಳುವಂತೆ ತಿಳಿಸಲಾಗಿತ್ತು. ಅಂದು ಮನಮೋಹನ್ ಸಿಂಗ್ ಭೇಟಿ ಕೊಟ್ಟಾಗ ಮಲಗಿರುವ ಸೈನಿಕನ ಫೋಟೋ ಇದೆ. ಅದು ಹೆಚ್ಚು ಗಾಯಗೊಂಡಿರುವ ಹಿನ್ನಲೆಯಲ್ಲಿ ಸೈನಿಕ ಮಲಗಿದ್ದಾರೆ.

ಗಾಯ ವಾಸಿಯಾಗಿದ್ದಲ್ಲಿ, ಅಥವಾ ಸೈನಿಕ ಚೇತರಿಸಿಕೊಂಡಿದ್ದಲ್ಲಿ, ಎದ್ದು ಕುಳಿತುಕೊಳ್ಳುವುದು ವಾಡಿಕೆ. ಮನಮೋಹನ್ ಸಿಂಗ್ ರವರು ಶ್ರೀನಗರದ ಸೈನಿಕ ಆಸ್ಪತ್ರೆಗೆ ಭೇಟಿಕೊಟ್ಟಾಗ ತೆಗೆದಿರುವ ಫೋಟೋ ಸಾಕ್ಷಿಯಾಗಿದೆ.

ಹೀಗೆ ಸಾಮಾಜಿಕ ಜಾಲ ತಾಣಗಳಲ್ಲಿ ಮೋದಿಯ ಭೇಟಿ ಬಗೆಗಿನ ಟೀಕೆ,ಅನುಮಾನಗಳಿಗೆ ಉತ್ತರ ಕೊಡುವ ಸಣ್ಣ ಪ್ರಯತ್ನ ಇಲ್ಲಿ ಮಾಡಲಾಗಿದೆ. ಈ ವರದಿಗೆ ರಾಷ್ಟ್ರೀಯ ಮಾಧ್ಯಮವೊಂದರ ಫ್ಯಾಕ್ಟ್ ಚೆಕ್ ಮತ್ತು ರಕ್ಷಣಾ ಇಲಾಖೆಯ ಕೆಳಗೆ ನೀಡಲಾಗಿರುವ ಪ್ರೆಸ್ ರಿಲೀಸ್ ನೆರವಾಗಿದೆ.

ಇಲ್ಲಿ ಯಾರು ಸರಿ, ಯಾರು ತಪ್ಪು ಅನ್ನುವುದು ಮುಖ್ಯವಲ್ಲ, ಒಂದು ಫೋಟೋ ಇಟ್ಟುಕೊಂಡು ಅಳೆಯುವುದೆಷ್ಟು ಸರಿ ಅನ್ನೋದಷ್ಟೇ ಪ್ರಶ್ನೆಯಾಗಿದೆ.