ಸಮುದ್ರಮಥನಕಾಲದಲ್ಲಿ ಅಮೃತಪಾನಕ್ಕೆ ಅಡ್ಡಿಪಡಿಸಿ ತನ್ನ ಸಾವಿಗೆ ಕಾರಣನಾದ ಸೂರ್ಯನ ಮೇಲೆ ಸೇಡುತೀರಿಸಲಿಕ್ಕಾಗಿ ರಾಹುವು ಸೂರ್ಯನನ್ನು ನುಂಗುತ್ತಾನೆ ಎನ್ನುತ್ತದೆ ಭಾರತೀಯ ಸನಾತನ ವಿಜ್ಞಾನ.. ಒಂದು ನಿರ್ದಿಷ್ಟ ರೇಖೆಯಲ್ಲಿ ಸೂರ್ಯ – ಚಂದ್ರ – ಭೂಮಿ ಬಂದಾಗ ಚಂದ್ರನಿಂದ ಮರೆಯಾದ ಸೂರ್ಯನ ಗೋಳಕದ ದರ್ಶನವೇ ಗ್ರಹಣವೆನ್ನುತ್ತದೆ ಇಂದಿನ ಆಧುನಿಕ ವಿಜ್ಞಾನ. ಪರಸ್ಪರ ವಿರುದ್ಧವಾದ ಈ ಎರಡೂ ದೃಷ್ಟಿಕೋನಗಳೂ ಸತ್ಯವೇ? ಅಥವಾ ಯಾವುದಾದರೊಂದು ಮಾತ್ರವೇ ಸತ್ಯವೇ? ಒಂದು ಸತ್ಯವಾಗುವುದಾದರೆ ಇವೆರೆಡರಲ್ಲಿ ಯಾವುದು ಸತ್ಯ? ದೃಗ್ಗೋಚರವಾದ ನೆರಳು ಬೆಳಕಿನ ಆಟವು ಸತ್ಯವೇ? ಸನಾತನ ಜ್ಞಾನಪರಂಪರೆ ಒಪ್ಪಿದ ದೈತ್ಯ-ದೇವತೆಗಳ ಯುದ್ಧವು ಸತ್ಯವೇ?
ಸನಾತನದೃಷ್ಟಿಯಲ್ಲಿ ಗ್ರಹಣಕಾಲದಲ್ಲಿ ಉಂಟಾಗುವ ಏರುಪೇರುಗಳನ್ನು ವಿಶ್ಲೇಷಿಸಬಹುದು. ಆದರೆ ಆಧುನಿಕ ದೃಷ್ಟಿಯಲ್ಲಿ ಇದೆಲ್ಲವೂ ಜನರನ್ನು ಮರುಳುಮಾಡುವ ದಂದೆ ಎನಿಸಬಹುದು. ಹಾಗಾದರೆ ನಿಜವಾದ ಸಂಗತಿ ಏನು? ಕಣ್ಣಿಗೆ ಕಾಣಿಸುವ ಆಧುನಿಕ ವಿಶ್ಲೇಷಣೆಯನ್ನು ಪೂರ್ತಿಯಾಗಿ ನಿರಾಕರಿಸಿ ಕೇವಲ ಸನಾತನ ಪರಂಪರೆಯನ್ನು ಮಾತ್ರ ಅಂಗೀಕರಿಸುವುದೇ? ಅಥವಾ ಪುರಾತನ ಚಿಂತನೆಯನ್ನು ಮೂಡನಂಬಿಕೆಯೆಂದು ಅಲ್ಲಗಳೆಯುವುದೇ? ಅದೂ ಇರಲಿ.. ಇದೂ ಇರಲಿ.. ಎಂದು ಹೇಳುವುದು ‘ರಾಮಾಯ ಸ್ವಸ್ತಿ’ ‘ರಾವಣಾಯ ಸ್ವಸ್ತಿ’ ಎಂದಂತಾಗಬಹುದು.
ಶ್ರೀಮಧ್ವಾಚಾರ್ಯರು ತೋರಿಸಿದ ಶಾಸ್ತ್ರಚಿಂತನೆಯ ಮಾರ್ಗದಲ್ಲಿ ಇದಕ್ಕೆ ಉತ್ತರವನ್ನು ಹೀಗೆ ಕಂಡು ಕೊಳ್ಳಬಹುದುದಾಗಿದೆ.. ಈ ಗ್ರಹಣಸಂದರ್ಭದಲ್ಲಿ ಎರಡು ಘಟನೆಗಳು ನಡೆಯುತ್ತವೆ. ಒಂದು ನಮ್ಮ ಬಹಿಃಚಕ್ಷುವಿಗೆ ಗೋಚರವಾಗುವ ಆಧುನಿಕ ಪ್ರಕ್ರಿಯೆ. ಇನ್ನೊಂದು ಶಾಸ್ತ್ರೈಕವೇದ್ಯವಾದ ಸನಾತನ ಚಿಂತನೆ. ಆದರೆ ಎರಡೂ ಬೇರೆ ಬೇರೆನೇ. ಒಂದು ಪ್ರಧಾನವಾದರೆ ಇನ್ನೊಂದು ಅದಕ್ಕೆ ಸೂಚಕ. ಭಾರತ-ಚೀನ ಗಡಿಯಲ್ಲಿ ನಡೆದ ಹೊಡೆದಾಟವು ನಮಗೆ ತಿಳಿಯುವುದು ಇನ್ನೊಬ್ಬರ ಮಾತಿನ ಮೂಲಕ ಮಾತ್ರ. ನಾವದನ್ನು ಕಣ್ಣಾರೆ ನೋಡಿಲ್ಲ. ಆದರೆ ಅದರ ಸೂಚಕವಾದ ಘಟನೆಗಳನ್ನು ನೋಡಿದಾಗ ದೇಶಭಕ್ತನ ರಕ್ತ ಕುದಿಯುತ್ತದೆ. ದೇಶದ ಒಳಿತಿಗಾಗಿ ಪ್ರಾರ್ಥನೆಯು ನಡೆಯುತ್ತದೆ.ದೇವಾಲಯಗಳಲ್ಲಿ ವಾರ್ಷಿಕ ಉತ್ಸವಾದಿಗಳು ನಡೆಯುವಾಗ ಹೊರಭಾಗದ ಧ್ವಜಸ್ಥಂಭದಲ್ಲಿ ಪತಾಕೆಯನ್ನು ಹಾರಿಸುತ್ತೇವೆ. ಇದು ದೇವಾಲಯದ ಕಾರ್ಯಕ್ರಮಗಳ ಸೂಚಕ. ಅದನ್ನು ನೋಡಿ ಊರಿನ ಜನರು ತಮ್ಮ ಕಾರ್ಯಕ್ರಮಗಳನ್ನು ಹೊಂದಿಸಿಕೊಳ್ಳುತ್ತಾರೆ. ಪ್ರಧಾನವಾದುದು ದೇವರ ಉತ್ಸವ ಪ್ರಕ್ರಿಯೆಗಳು. ಧ್ವಜಾರೋಹಣ ಅದರ ಉದ್ಘೋಷಕ ಮಾತ್ರ.
ಹಾಗೆಯೇ ಪುರಾತನ ದ್ವೇಷದ ಸಾಧನೆಗಾಗಿ ಸೂರ್ಯನನ್ನು ರಾಹುವು ನುಂಗುವುದು ಪ್ರಧಾನವಾದ ಗ್ರಹಣ. ಅರ್ಥಾತ್ ಹಿಡಿಯುವುದು. ದೇವತೆಗಳ – ದೈತ್ಯರ ಕಾದಾಟ ಆಕ್ರಮಣಗಳು ನಮ್ಮ ಹೊರಗಿನ ಕಣ್ಣಿಗೆ ಕಾಣಿಸದು. ಕಣ್ಣಿಗೆ ಕಾಣಿಸುವ ಸೂರ್ಯಮಂಡಲವೇ ಸೂರ್ಯದೇವತೆಯಲ್ಲ. ಅದೊಂದು ಜಡವಾದ ತೇಜಸ್ಸಿನ ಪುಂಜ. ಅದಕ್ಕೆ ಅಭಿಮಾನಿಯಾದವನು ಸೂರ್ಯದೇವತೆ, ಅವನ ಅಂತರ್ಯಾಮಿ ಪ್ರಾಣಸ್ಥ ನಾರಾಯಣ. ಇವರ್ಯಾರೂ ನಮಗೆ ದೃಷ್ಟಿಗೋಚರರಲ್ಲ. ರಾಹುವಂತೂ ಮಹಾ ಮಾಯಾವಿ. ಆದ್ದರಿಂದ ರಾಹುವು ಸೂರ್ಯನನ್ನು ನುಂಗುವುದನ್ನಾಗಲೀ, ಶ್ರೀಮಹಾವಿಷ್ಣು ತನ್ನ ಚಕ್ರವನ್ನು ಪ್ರಯೋಗಿಸಿ ಅದನ್ನು ತಡೆಯುವುದನ್ನಾಗಲೀ ನಮ್ಮ ಬರಿಕಣ್ಣಿನಿಂದ ನೋಡಲು ಸಾಧ್ಯವಿಲ್ಲ.
ವಿಷ್ಣುಚಕ್ರದ ಆಗಮದಿಂದಾಗಿ ಪರಮಪವಿತ್ರವಾದ ಈ ಗ್ರಹಣದ ಕಾಲದಲ್ಲಿ ಸಾಧಕನ ಸಾಧನೆಗೆ ಅನಂತಫಲವಿರುವುದರಿಂದ ಆ ಕಾಲದ ಗುರುತನ್ನು ಮಾಡಿಕೊಡಲಿಕ್ಕಾಗಿಯೇ, ಸಕಲ ಚರಾಚರಪದಾರ್ಥಗಳನ್ನು ಪ್ರೇರೇಪಿಸುವ ಭಗವಂತನು ಸೂರ್ಯಮಂಡಲ-ಚಂದ್ರಮಂಡಲ-ಭೂಮಿಗಳ ಮಧ್ಯೆ ಈ ನೆರಳು ಬೆಳಕಿನ ಕ್ರೀಡೆಯನ್ನು ತೋರಿಸುತ್ತಾನೆ. ಸಾಧಕರು ಆ ಕಾಲವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ. ಆದ್ದರಿಂದ ಇಲ್ಲಿ ಎರಡು ಘಟನೆಗಳು ನಡೆಯುವುದರಿಂದ ಯಾವುದನ್ನೂ ನಿರಾಕರಿಸದೆ, ವಿರೋಧವನ್ನು ಪರಿಹರಿಸಬಹುದಾಗಿದೆ. ಹೀಗೆ ಗ್ರಹಣವನ್ನು ಅರ್ಥೈಸಿಕೊಳ್ಳುವುದರಿಂದ, ಸನಾತನ ಪರಂಪರೆಯಲ್ಲಿ ದೃಢನಂಬಿಕೆಯನ್ನಿಟ್ಟಿರುವ ಸಜ್ಜನರು ಆಧುನಿಕ ಚಿಂತಕರ ಪ್ರಶ್ನೆಗಳಿಂದ ಮುಜುಗರಪಡಬೇಕಾಗಿಲ್ಲ. ಸ್ವಂತಿಕೆಯನ್ನು ಬಿಟ್ಟುಕೊಡವುದೂ ಬೇಕಾಗಿಲ್ಲ.
ಗ್ರಹಣದೋಷದ ಪರಿಹಾರ ಹೇಗೆ..?
ಇನ್ನು ಗ್ರಹಣದೋಷದ ಪರಿಹಾರಕ್ಕಾಗಿ ಸೂರ್ಯ-ಚಂದ್ರರ ಪ್ರಾರ್ಥನೆಯ ಜೊತೆಗೆ ರಾಹುಕೇತುಗಳ ಪ್ರಾರ್ಥನೆಯೂ ಪ್ರಚಲಿತವಾಗಿದೆ. ಇಲ್ಲಿ ಸೂರ್ಯ-ಚಂದ್ರರ ಪ್ರಾರ್ಥನೆ, ಭಗವಂತನ ಚಿಂತನೆ ಯೋಗ್ಯವಾಗಿದೆಯಾದರೂ ಸೂರ್ಯನನ್ನೇ ನುಂಗಲು ಬರುವ ರಾಹುವನ್ನು ಪ್ರಾರ್ಥಿಸುವುದು ಒಂದು ವಿಡಂಬನೆಯಾಗಿದೆ. ಭಾರತೀಯ ಸೈನಿಕರನ್ನು ಹುತಾತ್ಮರನ್ನಾಗಿಸಿದ ಪರದೇಶದ ಸೈನ್ಯವನ್ನು ಹೊಗಳುವುದು ಹೇಗೆ ದೇಶದ್ರೋಹವೆನಿಸುವುದೋ, ಹಾಗೆಯೇ ನಮ್ಮ ದೇಹದ, ನಮ್ಮ ದೇಶದ, ಪ್ರಪಂಚದ ರಕ್ಷಣೆಯನ್ನು ಭಗವತ್ಸೇವಾರೂಪವಾಗಿ ನಿಯತ್ತಿನಿಂದ ಮಾಡುವ ಸೂರ್ಯನನ್ನೇ ನುಂಗಿ ಜಗತ್ತನ್ನು ಅಂಧಕಾರದಲ್ಲಿ ಮುಳುಗಿಸಲು ಬರುವ ರಾಹುವನ್ನು ಸ್ತುತಿಸುವುದು ಒಂದು ರೀತಿಯಲ್ಲಿ ದೇವಹೇಳನೆ ಹಾಗೂ ಮಹಾಪರಾಧ.
ಈ ನಿಟ್ಟಿನಲ್ಲಿ ನಮಗೆ ಮಾರ್ಗದರ್ಶನವನ್ನು ಮಾಡಿದವರು ಶ್ರೀಮಧ್ವಾಚಾರ್ಯರು ಹಾಗೂ ಶ್ರೀವಾದಿರಾಜಗುರುಗಳು. ಶ್ರೀಮಹಾವಿಷ್ಣುವಿನ ಚಕ್ರದಿಂದ ರಾಹುವಿನ ಸಂಹಾರವಾದ ಮೇಲೆ ಅವನ ತಲೆಯಲ್ಲಿ ನೆಲೆಸಿರುವ ರಾಹು(ಕೇತು)ನಾಮಕರಾದ ದೇವತೆಗಳನ್ನು ಪೂಜಿಸಬೇಕಷ್ಟೇ ಹೊರತು ಸೂರ್ಯನನ್ನು ಮರ್ದಿಸುವ ದೈತ್ಯರಾಹುವನ್ನು ಸರ್ವಥಾ ಧ್ಯಾನಿಸಬಾರದು ಎಂಬುದು ಗುರುಗಳ ಆದೇಶ. ಭಗವಂತ ಸರ್ವಾಂತರ್ಯಾಮಿಯಾಗಿದ್ದರೂ ದೈತ್ಯಾಧಿಷ್ಠಾನದಲ್ಲಿ ಆರಾಧಿಸುವ ಅಧಿಕಾರ-ಅರ್ಹತೆಗಳೂ ನಮಗಿಲ್ಲವಾದ್ದರಿಂದ ಸಿಂಹಿಕಾಸುತರಾಹುವಿನ ಅಂತರ್ಯಾಮಿ ಭಗವಂತ(ವರಾಹ)ನನ್ನು ಧ್ಯಾನಿಸುತ್ತೇನೆ ಎಂಬುದೂ ಶಾಸ್ತ್ರ ವಿರುದ್ಧ.
ಹೀಗೆ ಗ್ರಹಣವನ್ನು ಸರಿಯಾದ ನಿಟ್ಟಿನಲ್ಲಿ ವಿಶ್ಲೇಷಿಸಿ ಅರ್ಥೈಸಿಕೊಂಡು, ಗ್ರಹಣಕಾಲದಲ್ಲಿ ಸರ್ವಸ್ವಾಮಿ-ಸರ್ವನಿಯಾಕನಾದ ಭಗವಂತನ ಹಾಗೂ ಭಗವದ್ಭಕ್ತರ ಧ್ಯಾನ-ಚಿಂತನೆಗಳನ್ನು ಮಾಡಿ, ಆತ್ಮೋದ್ಧಾರವನ್ನೂ, ದೇಶೋದ್ಧಾರವನ್ನು ಮಾಡಿಕೊಳ್ಳೋಣ.
ಶ್ರೀಕೃಷ್ಣಾರ್ಪಮಸ್ತು.
ಬರಹ: ಡಾ. ಕಡಂದಲೆ ಗಣಪತಿ ಭಟ್,
ನವೀನ ನವ್ಯ, ದ್ವೈತ ವೇದಾಂತ ವಿದ್ವಾನ್ ಹಾಗೂ ನಿರ್ದೇಶಕರು
ಶ್ರೀಮನ್ ಮಾಧ್ವ ಸಿದ್ಧಾಂತ ಪ್ರಭೋಧಕ ಸಂಸ್ಕೃತ ಸಂಶೋಧನಾ ಕೇಂದ್ರ, ಉಡುಪಿ