ಬೆಂಗಳೂರು: ರಾಜ್ಯದ ಕಲೆ, ಕುಸುರಿ ಮತ್ತು ಕೈಮಗ್ಗದ ವಸ್ತುಗಳಿಗೆ ಪ್ರಚಾರ ಮತ್ತು ಬೇಡಿಕೆ ಸೃಷ್ಟಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಇಕಾಮರ್ಸ್ ಸೈಟ್ ಫ್ಲಿಪ್‍ಕಾರ್ಟ್‍ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರ ಮೂಲಕ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ಫ್ಲಿಪ್‍ಕಾರ್ಟ್‍ನ ಸಮರ್ಥ್ ಯೋಜನೆಯಡಿಯಲ್ಲಿ ಸ್ಥಳೀಯ ಕಲೆಗಾರರು, ನೇಕಾರರು ಮತ್ತು ಕರಕುಶಲ ವಸ್ತುಗಳ ತಯಾರಕರು ತಯಾರಿಸಿರುವ ವಸ್ತುಗಳನ್ನು ದೇಶದ ಗ್ರಾಹಕರಿಗೆ ಪರಿಚಯಿಸುವ ಕಾರ್ಯವನ್ನು ಮಾಡಲಾಗುತ್ತದೆ.
ಈ ಮೂಲಕ ಸರ್ಕಾರ ಮತ್ತು ಫ್ಲಿಪ್‍ಕಾರ್ಟ್ ಸ್ಥಳೀಯರ ವ್ಯಾಪಾರ ಹೆಚ್ಚಿಸುವ, ಅವರಿಗೆ ಹೆಚ್ಚಿನ ಅವಕಾಶ ಒದಗಿಸುವ ಕಾರ್ಯವನ್ನು ಮಾಡಲಿದ್ದು, ಇದರಿಂದ ಮೇಕ್ ಇನ್ ಇಂಡಿಯ ಅಭಿಯಾನಕ್ಕೂ ಪ್ರೋತ್ಸಾಹ ನೀಡಿದಂತಾಗಲಿದೆ ಎಂದು ಕಂಪನಿ ತಿಳಿಸಿದೆ. ಇದರ ಮೂಲಕ ಕರ್ನಾಟಕ ಕರಕುಶಲ ಅಭಿವೃದ್ಧಿ ಪ್ರಾಧಿಕಾರದ ಬ್ರ್ಯಾಂಡ್ ಕಾವೇರಿ ಮತ್ತು ಕರ್ನಾಟಕ ಕೈಮಗ್ಗ ಅಭಿವೃದ್ಧಿ ಪ್ರಾಧಿಕಾರದ ಪ್ರಿಯದರ್ಶಿನಿ ಬ್ರಾಂಡ್‍ನ ಹೆಸರನ್ನು ದೇಶಾದ್ಯಂತ ಗುರುತಿಸಲು ಸಾಧ್ಯವಾಗಲಿದೆ.
ಈ ಒಪ್ಪಂದದಿಂದ ರಾಜ್ಯದ ವಾಣಿಜ್ಯ ಮತ್ತು ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗಲಿದೆ. ಸ್ಥಳೀಯ ಕರಕುಶಲ ವಸ್ತುಗಳು ಮತ್ತು ಕೈಮಗ್ಗವನ್ನು ರಾಷ್ಟ್ರಮಟ್ಟದ ಗ್ರಾಹಕರಿಗೆ ಒದಗಿಸಲು ಸಾಧ್ಯವಾಗಲಿದೆ ಎಂದು ಎಂಎಸ್‍ಎಂಇ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಫ್ಲಿಪ್‍ಕಾರ್ಟ್‍ನ ಸಮರ್ಥ್ ಯೋಜನೆ ಸ್ಥಳೀಯ ಕಲಾವಿದರಿಗೆ ರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪಲು ಇರುವ ಅಡೆತಡೆಗಳನ್ನು ನಿವಾರಿಸಲಿದೆ. ಇದರ ಮೂಲಕ ಉಚಿತವಾಗಿಯೇ ಕೆಟಲಾಗ್, ಮಾರುಕಟ್ಟೆ, ಆರ್ಥಿಕ ನಿರ್ವಹಣೆ, ಉದ್ಯಮದ ಆಗುಹೋಗು ಮತ್ತು ವಸ್ತುಗಳನ್ನಿರಿಸಲು ಸ್ಥಳಾವಕಾಶ ಮುಂತಾದ ವ್ಯವಸ್ಥೆಯನ್ನು ಕಂಪನಿಯೇ ಒದಗಿಸಲಿದೆ. ಇದೊಂದು ಸವಾಲಿನ ಸಮಯವಾಗಿದ್ದು, ಸ್ಥಳೀಯ ವಸ್ತುಗಳ ಪ್ರಚಾರ, ಬೇಡಿಕೆ ಒದಗಿಸುವುದು, ಉದ್ಯಮಕ್ಕೆ ಪ್ರೇರಣೆ ನೀಡುವುದು ಕಂಪನಿಯ ಉದ್ದೇಶವಾಗಿದೆ ಎಂದು ಫ್ಲಿಪ್‍ಕಾರ್ಟ್ ಗ್ರೂಪ್‍ನ ಕಾರ್ಪೋರೇಟ್ ವ್ಯವಹಾರ ಮುಖ್ಯಸ್ಥ ರಜನೀಶ್ ಕುಮಾರ್ ತಿಳಿಸಿದ್ದಾರೆ.