ಬೆಂಗಳೂರು: ಒಂದು ದಿನದ ವಿಧಾನ ಪರಿಷತ್ ಕಲಾಪದಲ್ಲಿ ಗಲಾಟೆ ಗದ್ದಲವೇ ಏರ್ಪಟ್ಟಿದೆ. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರ ಮೇಲೆ ವಿಶ್ವಾಸವಿಲ್ಲ, ಅವರು ಸಭಾಪತಿ ಸೀಟ್ ನಲ್ಲಿ ಕುಳಿತುಕೊಳ್ಳಬಾರದು ಅಂತ ಬಿಜೆಪಿಯವರು ಗಲಾಟೆ ಎಬ್ಬಿಸಿದ್ರೆ, ಕಾಂಗ್ರೆಸ್ ನವರು ಸಭಾಪತಿ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.
ಗಲಾಟೆಯಲ್ಲಿ ಸಚಿವರುಗಳು ಕೂಡ ಭಾಗಿಯಾಗಿದ್ದಾರೆ. ಕೈ ಕೈ ಮಿಲಾಯಿಸುವ ಮಟ್ಟಕ್ಕೂ ಕೂಡ ಪರಿಷತ್ ಗಲಾಟೆ ಹೋಗಿದ್ದು, ನೂಕಾಟ ತಳ್ಳಾಟಗಳೇ ತುಂಬಿವೆ. ಸಭಾಪತಿ ಕುರ್ಚಿಯ ಮುಂಭಾಗದಲ್ಲಿದ್ದ ಗ್ಲಾಸನ್ನು ಕಿತ್ತು ಹಾಕಿ ಗದ್ದಲವೆಬ್ಬಿಸಿದ್ದಾರೆ.
ಕೊರೊನಾ ಕಾಲದಲ್ಲಿ ಒಬ್ಬರ ಮೇಲೋಬ್ಬರು ಬಿದ್ದು ಒದ್ದಾಡಿದ ನಾಯಕರು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಸಭಾಪತಿ ಕುರ್ಚಿಯ ಸುತ್ತ ಮುತ್ತ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರೇ ತುಂಬಿದ್ದು, ಕುರ್ಚಿಗಾಗಿ ಬೃಹನ್ನಾಟಕವೇ ನಡೆದಿದೆ.
ರಾಜ್ಯ ಸರ್ಕಾರ ಕರೊನಾ ನೀತಿಯನ್ನು ಮುರಿದಿರುವ ಈ ಸದಸ್ಯ ಮೇಲೆ ಯಾವ ಕ್ರಮ ಕೈಗೊಳ್ಳುತ್ತೆ, ಮಾಸ್ಕ್ ಹಾಕದೇ ಇರುವ ಇವರ ಮೇಲೆ ಎಷ್ಟು ದಂಡ ಹಾಕುತ್ತೆ, ಅಂತರನೂ ಇಲ್ಲ, ಶಿಸ್ತು ಇಲ್ಲ, ಪರಿಷತನ್ನು ಚಿಂತಕರ ಚಾವಡಿ ಅಂತ ಕರೆಯಲಾಗುತ್ತಿತ್ತು, ಆದರೆ ಇವತ್ತು ಪರಿಷತ್ ಸಂತೆಯಂತೆ ಗೋಚರವಾಗುತ್ತಿದೆ.
ರಾಜಕಾರಣಿಗಳು ಏನು ಮಾಡಿದ್ರೂ ನಡೆಯುತ್ತೆ ಅನ್ನೋ ಧೋರಣೆ ಇಲ್ಲೂ ನಡೆಯುತ್ತಿದೆ. ಕೊರೊನಾದ ಆತಂಕದ ನಡುವೆ ಇವರ ಆಟಾಟೋಪಕ್ಕೆ ಬ್ರೇಕ್ ಹಾಕೋದು ಯಾರು? ಇಷ್ಟೆಲ್ಲ ಗದ್ದಲದ ನಡುವೆ ಸಭಾಪತಿ ಪೀಠಕ್ಕೆ ಆಗಮಿಸಿದ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಕಲಾಪವನ್ನು ಅನಿರ್ದಿಷ್ಟವದಿಗೆ ಮುಂದೂಡಿದ್ದಾರೆ.