ಬೆಂಗಳೂರು-ಅಹಿಂದ, ಅನ್ನುವ ಪದ ಕರ್ನಾಟಕದಲ್ಲಿ ರಾಜಕೀಯವಾಗಿ ಅತೀ ಹೆಚ್ಚು ಬಾರಿ ಬಳಕೆಯಾಗಿದೆ. ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರ ಪಾತ್ರ ಹಿರಿದು. ನಾವು ಅಹಿಂದ ಪರ ಇರುವ ಪಕ್ಷ ಅಂತ ಹೇಳುತ್ತಲೇ ಪ್ರಚಾರ ಮಾಡುವವರ ನಡುವೆ, ಭಾರತೀಯ ಜನತಾ ಪಾರ್ಟಿ ಅಚ್ಚರಿಯನ್ನು ಮೂಡಿಸಿದೆ. ವಿರೋಧಿಗಳಿಂದ ಕೋಮುವಾದಿ ಅಂತ ಕರೆಸಿಕೊಂಡ ಪಕ್ಷದಲ್ಲಿ ಅಹಿಂದ ತತ್ವದ ಪರಿಪಾಲನೆ ನಿರಂತರವಾಗಿ ಆಗುತ್ತಿದೆ ಅನ್ನುವುದಕ್ಕೆ ಸಾಕ್ಷಿಗಳು ಸಿಗುತ್ತಿವೆ.
ಮೇಲ್ಮನೆಯ ನಾಮನಿರ್ದೇಶನದಲ್ಲೂ ಅಚ್ಚರಿ
ಶಾಂತರಾಮ ಸಿದ್ದಿ, ಡಾ.ತಳವಾರ ಸಾಬಣ್ಣಗೆ ಒಲಿದ ಅದೃಷ್ಟ
ಭಾರತೀಯ ಜನತಾ ಪಾರ್ಟಿಯ ವಿಧಾನ ಪರಿಷತ್ ನಾಮನಿರ್ದೇಶನದ ಪಟ್ಟಿಯಲ್ಲಿ ಲಾಬಿ ಮಾಡಿರುವವರ ಹೆಸರುಗಳೇ ಇರುತ್ತೆ ಅಂತ ನಿರೀಕ್ಷಿಸಲಾಗಿತ್ತು. ಆದರೆ ಇಲ್ಲಿ, ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ, ಮಾಜಿ ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ವಿಶ್ವನಾಥ್ ಹೆಸರು ಮತ್ತು ಆಪರೇಷನ್ ಗೆ ನೆರವಾದ ಸಿ ಪಿ ಯೋಗೇಶ್ವರ್ ಹೆಸರು ನಿರೀಕ್ಷಿತವೂ ಆಗಿತ್ತು. ಆದರೆ ಶಾಂತರಾಮ ಸಿದ್ದಿ ಮತ್ತು ಡಾ.ತಳವಾರ ಸಾಬಣ್ಣರವರಿಗೆ ಅವಕಾಶ ನೀಡಿದ್ದು, ಬಿಜೆಪಿಯ ರಾಜಕಾರಣಿಗಳಿಗೂ ಅಚ್ಚರಿ ಮೂಡಿಸಿದೆ.
ಯಾರಿವರು ಶಾಂತರಾಮ ಸಿದ್ದಿ
ಸಿದ್ದಿ ಸಮುದಾಯ, ಪಶ್ಚಿಮಘಟ್ಟದ ವನವಾಸಿಗಳ ಏಳಿಗೆಗಾಗಿ ಶ್ರಮಿಸುತ್ತಿರುವ ಬಿಜೆಪಿಯ ಕಾರ್ಯಕರ್ತ. ಶಾಸನಸಭೆಯಲ್ಲಿ ಈ ಸಮುದಾಯದವರು ಕಾಣಿಸಿಕೊಳ್ಳಬೇಕೆಂಬ ಅವರ ತುಡಿತಕ್ಕೆ ಬಿಜೆಪಿ ದಾರಿ ಮಾಡಿಕೊಟ್ಟಿದೆ. ಪಕ್ಷದ ಇಮೇಜ್ ಹೆಚ್ಚಿಸಿಕೊಳ್ಳುವ ಆಶಯದಲ್ಲೇ ಬಿಜೆಪಿ ಶಾಂತರಾಮರವರಿಗೆ ಅವಕಾಶ ಮಾಡಿಕೊಟ್ಟರೂ, ಈ ರಾಜಕೀಯ ಮೇಲಾಟದ ನಡುವೆಯೂ ಇಂತಹ ನಿರ್ಧಾರ ಕೈಗೊಳ್ಳುವುದಕ್ಕೆ ಒಂದು ಗಟ್ಟಿ ನಿರ್ಧಾರ ಮಾಡಲೇಬೇಕು.

ಸಿದ್ದಿ ಸಮುದಾಯದ ಮೊದಲ ಪದವೀದರ ಅಂತ ಕರೆಸಿಕೊಳ್ಳುವ ಶಾಂತರಾಮ ಸಿದ್ದಿ ಆರ್ ಎಸ್ ಎಸ್ ನ ವನವಾಸಿ ಕಲ್ಯಾಣ ಸಂಸ್ಥೆಯ ಮೂಲಕ ಜನಪರ ಕೆಲಸಗಳನ್ನು ಮಾಡಿಸುತ್ತಿದ್ದರು. ಸಿದ್ದಿ ಜನರನ್ನು ಮುಖ್ಯವಾಹಿನಿಗೆ ಕರೆತರಬೇಕು, ಅವರಿಗೂ ಎಲ್ಲಾ ಕಡೆಗೂ ಅವಕಾಶ ಸಿಗಬೇಕು ಅನ್ನುವ ಧೋರಣೆಯ ಶಾಂತರಾಮ ಸಿದ್ಧಿಯವರ ಕನಸು ಸಾಕಾರಗೊಳಿಸಲು ಇದು ಸಕಾಲ.
ಡಾ.ತಳವಾರ ಸಾಬಣ್ಣ
ವಿಧಾನ ಪರಿಷತ್ ಗೆ ಅರ್ಹವಾದ ಆಯ್ಕೆ ಅಂತಲೇ ಕರೆಸಿಕೊಳ್ಳುತ್ತಿರುವವರು ಶಿಕ್ಷಣ ತಜ್ಞ ಡಾ.ತಳವಾರ ಸಾಬಣ್ಣ. ಶಿಕ್ಷಣ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರ, ಸೌಹಾರ್ದ ಚಟುವಟಿಕೆಗಳಿಂದಲೇ ಗುರುತಿಸಿಕೊಂಡವರು ಡಾ.ತಳವಾರ ಸಾಬಣ್ಣ. ಕಲಬುರ್ಗಿಯ ಕೋಲಿ ಸಮಾಜದವರಾದ ಡಾ.ತಳವಾರ ಸಾಬಣ್ಣರ ಪರ ಉತ್ತರ ಕರ್ನಾಟಕದ ಆರ್ ಎಸ್ ಎಸ್ ನ ಪ್ರಮುಖರು ನಿಂತಿದ್ದರು ಎನ್ನಲಾಗಿದೆ.ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯಲ್ಲಿ 23 ವರ್ಷಗಳಿಂದ ಅರ್ಥಶಾಸ್ತ್ರದ ಪ್ರಾದ್ಯಾಪಕರಾಗಿ, ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಏನೇ ಆದರೂ, ಬಿಜೆಪಿಯ ರಾಜ್ಯ ನಾಯಕರಿಗೂ ಕೂಡ ಸಾಬಣ್ಣ ಆಯ್ಕೆ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ.

ರಾಜ್ಯಸಭೆಯ ಆಯ್ಕೆಯಲ್ಲೂ ಬಿಜೆಪಿಯದ್ದು ಅಚ್ಚರಿ!
ಕಾಂಗ್ರೆಸ್ ನಿಂದ ಖರ್ಗೆ, ಬಿಜೆಪಿಯಿಂದ ಗಸ್ತಿ,ಈರಣ್ಣ!
ರಾಜ್ಯಸಭೆಗೆ ರಾಜ್ಯದಿಂದ ಉದ್ಯಮಿಗಳು, ಬಿಜೆಪಿಯ ಮಹಾನ್ ನಾಯಕರೆಲ್ಲರೂ ಲಾಬಿ ನಡೆಸಿದ್ದರು. ಇವರ ನಡುವೆ ಕೇಂದ್ರದ ನಾಯಕರು ಬಿಜೆಪಿಯ ಕಾರ್ಯಕರ್ತರನ್ನು ಗುರುತಿಸಿದರು. ಕಲ್ಯಾಣ ಕರ್ನಾಟಕದಿಂದ ಅಶೋಕ್ ಗಸ್ತಿ ಹಾಗೂ ಈರಣ್ಣ ಕಡಾಡಿಯವರನ್ನು ಆಯ್ಕೆ ಮಾಡಲಾಯ್ತು. ಅವರು ರಾಜ್ಯ ಸಭೆಯ ಸದಸ್ಯರಾಗಿ ಪ್ರಮಾಣವಚನವನ್ನೂ ಸ್ವೀಕರಿಸಿಯಾಗಿದೆ.

ಕಾರ್ಯಕರ್ತರಿಗೆ ಮತ್ತು ಹಿಂದುಳಿದ ವರ್ಗದ ಮುಖಂಡರಿಗೆ ಆವಕಾಶ ನೀಡಿದ್ದು ರಾಜ್ಯ ರಾಜಕಾರಣದಲ್ಲೇ ಅಚ್ಚರಿಗೂ ಕಾರಣವಾಗಿತ್ತು. ಇವರ ಆಯ್ಕೆಯ ಬೆನ್ನಲ್ಲೇ ಕಾಂಗ್ರೆಸ್ ನಿಂದ ಹಲವು ದಶಕಗಳಿಂದ ರಾಜಕೀಯದಲ್ಲೇ ಇದ್ದು, ಕೇಂದ್ರ, ರಾಜ್ಯದ ಸಚಿವರಾಗಿದ್ದ ಮಲ್ಲಿಕಾರ್ಜುನ್ ಖರ್ಗೆಯವರನ್ನು ಆಯ್ಕೆ ಮಾಡಿದಾಗ, ಬಿಜೆಪಿಯ ನಾಯಕರು ನಾವೇ ಭಿನ್ನವೆಂದು ತಮ್ಮ ಬೆನ್ನು ತಟ್ಟಿಕೊಂಡಿದ್ದರು.
ಹೀಗೆ ಅಹಿಂದ ತತ್ವದತ್ತ ಬಿಜೆಪಿ ಒತ್ತು ಕೊಡುತ್ತಿರುವುದು ಸ್ಪಷ್ಟವಾಗುತ್ತಿದೆ. ಅಲ್ಲದೇ ಬಿಜೆಪಿಯ ವಿರೋಧಿಗಳಿಗೂ ಇದು ನುಂಗಲಾರದ ತುತ್ತಾಗಿದೆ. ತಮ್ಮ ವೋಟ್ ಬ್ಯಾಂಕ್ ನಲ್ಲಿ ಬಿಜೆಪಿ ಉತ್ತಮ ಸ್ಥಾನ ಮಾನಗಳನ್ನು ನೀಡುವುದರ ಮೂಲಕ ಖಾತೆ ತೆರೆಯುತ್ತಿರುವುದು ವಿರೋಧಿಗಳಿಗೆ ಎಡೆಬಿಡದೇ ಕಾಡಲು ಶುರುವಾದರೂ ಅಚ್ಚರಿಯಿಲ್ಲ.