ಮಂಗಳೂರು-ಅಲ್ಲಿ ಅದು ಮಾಡು, ಇಲ್ಲಿ ಇದು ಮಾಡು, ನಾನು ಯಾರು ಗೊತ್ತಾ, ನಾನು ಕಾರ್ಪೋರೇಟರ್ ನಿನ್ನನ್ನು ಒಳಗೇ ಹಾಕಿಸ್ತೀನಿ, ಇತ್ಯಾದಿ ಡೈಲಾಗ್ ಗಳು, ಅಲ್ಲಲ್ಲಿ ಧಮ್ಕಿ,ಯಾರೋ ಒಬ್ಬ ಸಾಮಾನ್ಯನ ಮೇಲೆ ಬಲ ಪ್ರಯೋಗ ಮಾಡುವ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಸಾಮಾನ್ಯವಾಗಿ ಕಾಣಸಿಗುತ್ತಾರೆ.
ಆದರೆ ಮಂಗಳೂರಿನ ಕದ್ರಿಕಂಬಳದ ಕಾರ್ಪೋರೇಟರ್ ಮಾತ್ರ ವಿಭಿನ್ನ, ಮತ್ತು ಮಾದರಿ ಜನಪ್ರತಿನಿಧಿಯಾಗಿದ್ದಾರೆ. ಕದ್ರಿ ಕಂಬಳ ವಾರ್ಡ್ ನ ಬಿಜೆಪಿ ಕಾರ್ಪೋರೇಟರ್ ಮನೋಹರ್ ಶೆಟ್ಟಿ ತಮ್ಮ ವಿಭಿನ್ನ ದೃಷ್ಟಿಕೋನ ಮತ್ತು ಜನಸೇವೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಮ್ಯಾನ್ ಹೋಲ್ ಗೆ ಇಳಿದ ರಿಯಲ್ ಹೀರೋ
ಜನಸೇವೆಗಾಗಿ ಎಲ್ಲದಕ್ಕೂ ಸೈ ಮನೋಹರ್ ಶೆಟ್ಟಿ
ಕದ್ರಿ ಕಂಬಳ ರಸ್ತೆಯಲ್ಲಿನ ಚರಂಡಿಯಲ್ಲಿ ಮಳೆ ನೀರಿನ ಹರಿವಿಗೆ ಸಮಸ್ಯೆಯಾಗಿತ್ತು. ತಡೆಯುಂಟಾಗಿ ರಸ್ತೆಯೆಲ್ಲ ನೀರು ಹರಿದು ಹೋಗುವುದರಲ್ಲಿತ್ತು, ಸಮಸ್ಯೆ ತಿಳಿಯಲು ಕಾರ್ಪೋರೇಟರ್ ಸ್ಥಳಕ್ಕೆ ಆಗಮಿಸಿದ್ರು. ಪಕ್ಕದಲ್ಲೇ ಮ್ಯಾನ್ ಹೋಲ್ ಚೇಂಬರ್ ಇದ್ದರೂ ಕಾರ್ಮಿಕರು ಅದರೊಳಗೆ ಇಳಿದು ಸಮಸ್ಯೆ ಬಗೆಹರಿಸಲು ಒಪ್ಪಲಿಲ್ಲ.
ಹೀಗಾದಾಗ ಕಾರ್ಪೋರೇಟರ್ ಮನೋಹರ್ ಶೆಟ್ಟಿಯವರು ಚೇಂಬರ್ ಒಳಗಡೆ ಇಳಿದು ಸಮಸ್ಯೆ ಏನೆಂದು ಕಾರ್ಮಿಕರಿಗೆ ವಿವರಿಸಿದ್ರು. ಇಷ್ಟಾದಾಗಲೂ ಕಾರ್ಮಿಕರು ಚೇಂಬರ್ ಒಳಗಡೆ ಇಳಿಯದಿದ್ದಾಗ ಕಾರ್ಪೋರೇಟರ್ ಮನೆಯಿಂದ ಕೂಡಲೇ ಬದಲಿ ಬಟ್ಟೆ ತರಿಸಿ, ಧರಿಸಿಕೊಂಡು ಚೇಂಬರ್ ಗೆ ಇಳಿದೇ ಬಿಟ್ಟರು. ಅಷ್ಟೇ ಅಲ್ಲ, ಉಂಟಾಗಿದ್ದ ಸಮಸ್ಯೆಯನ್ನು ಸರಿಪಡಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ.

ಇದು ನಿಜಕ್ಕೂ ಜನಪರ ಕಾಳಜಿಯಿರುವ ನಾಯಕರು ಮಾಡುವ ಕೆಲಸವಾಗಿದೆ. ತಮ್ಮ ಅದ್ಭುತ ಕೆಲಸದ ಮೂಲಕ ಜನಪ್ರತನಿಧಿಗಳಿಗೆ ಮಾದರಿಯಾಗಿದ್ದಾರೆ