ಲಡಾಖ್: ವಿಸ್ತರಿಸುವ ಯುಗ ಮುಗಿದಿದೆ. ಈಗೇನಿದ್ರೂ ವಿಕಾಸದ ಯುಗ. ಇದನ್ನ ಅರ್ಥಮಾಡಿಕೊಂಡರೆ ಒಳಿತು. ಶಾಂತಿ ನಮ್ಮ ಬಲಹೀನತೆ ಅಲ್ಲವೇ ಅಲ್ಲ. ಇದು ಇಂದು ಪ್ರಧಾನಿ ರಣಾಂಗಣದಲ್ಲಿ ನಿಂತು ಶತೃವಿನ ವಿರುದ್ಧ ಗುಡುಗಿದ ಪರಿ. ಗಲ್ವಾನ್ ಕಣಿವೆಯಲ್ಲಿ ಚೀನಾ – ಭಾರತ ಗಡಿ ಕ್ಯಾತೆ ಉಲ್ಬಣಿಸಿದ ಬಳಿಕ ಮೊದಲ ಬಾರಿಗೆ ಲಡಾಖ್ಗೆ ತೆರಳಿದ ಪ್ರಧಾನಿ ಮೋದಿ ಗಡಿ ರಕ್ಷಣೆಗೆ ನಿಂತ ವಿರಯೋಧರ ಜೊತೆ ಸಂವಾದ ನಡೆಸಿದ್ರು. ಈಮೂಲಕ ವಿಶ್ವದ ಎತ್ತರದ ಪ್ರದೇಶದಲ್ಲಿ ನಿಂತು ದೇಶಕಾಯ್ತಿರೋ ಸೈನಿಕರನ್ನ ಹುರಿದುಂಬಿಸುವ ಕೆಲಸ ಮೋದಿ ಮಾಡಿದ್ರು.

ಇನ್ನು ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ ಇದು ದೇಶಕ್ಕೆ ಸರ್ವಸ್ವ ತ್ಯಾಗ ಮಾಡುವ ರಾಷ್ಟ್ರ ಭಕ್ತರ ಭೂಮಿ. ವೀರತ್ವ ನಮ್ಮ ಭೂಮಿಯ ಕಣ ಕಣದಲ್ಲೂ ಇದೆ. ಆ ವೀರತನ ನಿಮ್ಮ ಮುಖದಲ್ಲಿ ರಾರಾಜಿಸುತ್ತಿದೆ ಎಂದರು. ದೇಶ ಕಾಯಲು ನಿಂತಿರೋ ಪ್ರತಿಯೊಬ್ಬ ಸೈನಿಕರೂ ತಮ್ಮ ತಮ್ಮ ಪರಾಕ್ರಮ ತೋರಿಸಿದ್ದಾರೆ. ಅವರ ಶೌರ್ಯಕ್ಕೆ ಇಡೀ ದೇಶ ತಲೆಬಾಗಿದೆ. ನಿಮ್ಮ ಶೌರ್ಯ ಪರಾಕ್ರಮದಿಂದಾಗಿ ನಾವು ಎದೆಯುಬ್ಬಿಸಿ ನಿಲ್ಲುವಂತಾಗಿದೆ ಎಂದು ಸೈನಿಕರ ಪರಾಕ್ರಮವನ್ನ ಗುಣಗಾನ ಮಾಡಿದರು.

ಮುಂದುವರೆದು ಮಾತನಾಡಿದ ಮೋದಿ ಭಾರತದ ತಂಟೆಗೆ ಬಂದವರಿಗೆ ನಮ್ಮ ವೀರ ಯೋಧರು ತಕ್ಕ ಶಾಸ್ತಿ ಮಾಡಿದ್ದಾರೆ. ಈಮೂಲಕ ವಿಶ್ವಕ್ಕೆ ದೊಡ್ಡ ಸಂದೇಶ ರವಾನಿಸಿದ್ದಾರೆ. ಕಾಲುಕೆರೆದು ಬರುವವರಿಗೆ ಸೂಕ್ತ ಪ್ರತ್ಯುತ್ತರ ಸಿಕ್ಕಿದೆ. ಭಾರತದ ಶಕ್ತಿ ಈಗ ವಿಶ್ವವೇ ಅರಿಯುವಂತಾಗಿದೆ. ಎಂದು ಪ್ರಧಾನಿ ಲಡಾಖ್ ನೆಲದಲ್ಲಿ ನಿಂತು ಘರ್ಜಿಸಿದರು.

ಭಾರತ ಯಾವತ್ತೂ ಶಾಂತಿ ಮತ್ತು ಸ್ನೇಹವನ್ನು ಬಯಸುವ ರಾಷ್ಟ್ರ. ಹಾಗಂತ ಶಾಂತಿ ಮಂತ್ರ ನಮ್ಮ ಬಲಹೀನತೆ ಅಲ್ಲವೇ ಅಲ್ಲ. ನಾವು ಶಾಂತವಾಗಿರುವುದು ಒಂದು ಶಕ್ತಿಯೇ. ಸದ್ಯ ಸೇನೆ ಬಲಪಡಿಸುವ ಕೆಲಸ ಆರಂಭವಾಗಿದೆ. ಸರ್ಕಾರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಗೆ ಮುಂದಾಗಿದೆ. ವೇಗವಾಗಿ ಸೇನಾ ಸಾಮರ್ಥ್ಯ ವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ. ಈಮೂಲಕ ಯಾರೇ ಕಾಲುಕೆರೆದು ಬಂದರೂ ನಾವು ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಎಂದು ಪ್ರಧಾನಿ ಮೋದಿ ಶತೃ ಚೀನಾ ಹೆಸರು ಹೇಳದೆ ಜಾಡಿಸಿದರು.

ಸದ್ಯ ದೇಶದ ಗಡಿ ರಕ್ಷಣೆಯ ಜವಾಬ್ದಾರಿಯನ್ನ ನೀವು ಯಶಸ್ವಿಯಾಗಿ ನಿಬಾಯಿಸುತ್ತಿದ್ದೀರಿ. ಈಗ ಆತ್ಮ ನಿರ್ಭರ ಭಾರತದ ನಿರ್ಮಾಣ ಆಗಬೇಕಿದೆ. ಈಗ ವಿಕಾಸವಾದದ ಸ್ಪರ್ಥೆ ಏರ್ಪಟ್ಟಿದೆ. ನಾವು ಆ ಕನಸನ್ನ ಸಾಕಾರಗೊಳಿಸಲು ಸರ್ವಪ್ರಯತ್ನ ಮಾಡ್ತಿದ್ದೇವೆ. ಎಂದು ಪ್ರಧಾನಿ ಮೋದಿ ಲಡಾಖ್ ರಣಾಂಗಣದಲ್ಲಿ ಸೈನಿಕರಿಗೆ ಸ್ಥೈರ್ಯ ತುಂಬುತ್ತಲೇ ನೆರೆಯ ಚೀನಾಗೆ ಎಚ್ಚರಿಕೆ ಸಂದೇಶ ರವಾನಿಸಿದರು.