ರಾಜಸ್ಥಾನ- ರಾಜಸ್ಥಾನ ರಾಜಕೀಯದಲ್ಲಿ ಉಂಟಾಗಿದ್ದ ಗೊಂದಲಗಳಿಗೆ ಕೊನೆಗೂ ತೆರೆಬಿದ್ದಿದೆ. ಕಾಂಗ್ರೆಸ್ ಸರ್ಕಾರವನ್ನು ಬೀಳಿಸಬೇಕೆಂದು 18 ಬಂಡಾಯ ಶಾಸಕರನ್ನು ಕಟ್ಟಿಕೊಂಡು ಹೊರಟಿದ್ದ ಸಚಿನ್ ಪೈಲಟ್ ಯುಟರ್ನ್ ಹೊಡೆದಿದ್ದಾರೆ.

ಕಾಂಗ್ರೆಸ್ ವಿರುದ್ಧ ತೊಡೆತಟ್ಟಿದ್ದ ಸಚಿನ್ ಪೈಲಟ್, ತಮ್ಮ ಜೊತೆಗಿದ್ದ ಹದಿನೆಂಟು ಶಾಸಕರುಗಳ ವಿಶ್ವಾಸಕ್ಕೆ ಪಾತ್ರವಾಗಿದ್ದರು. ಸಚಿನ್ ಪೈಲಟ್ ಮುಂದಿನ ನಿರ್ಧಾರವೇನು,ಎತ್ತ ಸಾಗುತ್ತಾರೆ, ಬಿಜೆಪಿ ಸೇರುತ್ತಾರಾ ಅಥವಾ ಹೊಸ ಪಕ್ಷ ಕಟ್ಟುತ್ತಾರಾ ಅನ್ನುವುದರ ಕುರಿತು ಸ್ಪಷ್ಟತೆ ಹೊರಬೀಳಲೇ ಇಲ್ಲ. ಜೊತೆಗೆ ಕಾಂಗ್ರೆಸ್ ಕೂಡ ಬಂಡಾಯ ಶಾಸಕರ ವಿರುದ್ಧ ಅನರ್ಹತೆಯ ಅಸ್ತ್ರ ಪ್ರಯೋಗಿಸಲು ಯೋಜನೆ ರೂಪಿಸಿತ್ತು.
ಹೀಗಿರುವಾಗಲೇ ಸಚಿನ್ ಪೈಲಟ್ ಜೊತೆಗೆ ಕಾಂಗ್ರೆಸ್ ನಾಯಕರು ನಿರಂತರವಾಗಿ ಮಾತುಕತೆ ನಡೆಸುತ್ತಲೇ ಇದ್ದರು. ಪೈಲಟ್ ಕಾಂಗ್ರೆಸ್ ಬಿಟ್ಟು ಹೋಗದಂತೆ ತಡೆಯುವ ಪ್ರಯತ್ನವನ್ನು ಮಾಡುತ್ತಲೇ ಇದ್ದರು. ಈ ನಡುವೆ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರೀಯಾಂಕ ಗಾಂಧಿ ನಡೆಸಿದ ಮಾತುಕತೆ ಫಲ ನೀಡಿದ್ದು ಸಚಿನ್ ಪೈಲಟ್ ಮತ್ತೆ ಪಕ್ಷದ ತೆಕ್ಕೆಗೆ ಸೇರಿಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿರುವ ಸಚಿನ್ ಪೈಲಟ್ ನಮ್ಮ ಬೇಡಿಕೆಗಳಿಗೆ ಕಾಂಗ್ರೆಸ್ ನಾಯಕರು ಸ್ಪಂಧಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೇ ಮುಂದುವರೆಯುವುದಾಗಿ ತಿಳಿಸಿದ್ದಾರೆ.

ಬಿಜೆಪಿ ಸೇರುತ್ತಾರೆ ಅಂತಿದ್ದವರಿಗೆ ಮುಖಭಂಗ
ಸಚಿನ್ ಪೈಲಟ್ ತನ್ನ ಗೆಳೆಯ ಜ್ಯೋತಿರಾಧಿತ್ಯ ಸಿಂಧ್ಯಾರಂತೆ ಬಿಜೆಪಿಗೆ ಸೇರುತ್ತಾರೆ ಅಂತ ವಿಶ್ಲೇಷಿಸಲಾಗಿತ್ತು. ರಾಜಸ್ತಾನ ಬಿಜೆಪಿ ವಲಯದಲ್ಲೂ ಸಂತಸಕ್ಕೆ ಕಾರಣವಾಗಿತ್ತು. ಅಲ್ಲದೇ ಸಚಿನ್ ಪೈಲಟ್ ಬಂಡಾಯವನ್ನು ಇಟ್ಟುಕೊಂಡು ಬಿಜೆಪಿಗೆ ಸೇರುತ್ತಾರೆ ಅಂತ ಹಲವರು ಖುಷಿ ವ್ಯಕ್ತಪಡಿಸಿದ್ದರು, ಆದರೇ ಈಗ ಸಚಿನ್ ಯೂಟರ್ನ್ ಅವರಿಗೆ ಮುಖಭಂಗವನ್ನುಂಟುಮಾಡಿದೆ.
ಈ ಮೂಲಕ ಕಾಂಗ್ರೆಸ್ ಪಕ್ಷ ತಮ್ಮ ನಿರಂತರ ಪ್ರಯತ್ನದಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದ ಯುವ ನಾಯಕನನ್ನು ವಾಪಾಸ್ ಬರುವಂತೆ ಮನವೊಲಿಸಿ ಯಶಸ್ವಿಯಾಗಿದೆ. ಈ ಮೂಲಕ ರಾಜಸ್ತಾನದಲ್ಲಿ ಸರ್ಕಾರ ಪತನದ ಸದ್ಯಕ್ಕೆ ಮತ್ತಷ್ಟು ದೂರವಾಗಿದೆ.