ಬೆಂಗಳೂರು: ರಾಜ್ಯಾದ್ಯಂತ ನಡೆದ ಸಾರಿಗೆ ನೌಕರರ ಮುಷ್ಕರದಲ್ಲಿ ಸಾರಿಗೆ ಇಲಾಖೆಗೆ ಸಾಕಷ್ಟು ನಷ್ಟ ಉಂಟಾಗಿದೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಜೊತೆಗೆ ಹಲವು ಬೇಡಿಕೆಗಳನ್ನು ಮುಂದಿಟ್ಟು ನಾಲ್ಕೂ ಸಾರಿಗೆ ನಿಗಮಗಳ ನೌಕರರು ಮುಷ್ಕರ ಆರಂಭಿಸಿದ್ದರು. ಇದರಿಂದ ರಾಜ್ಯಾದ್ಯಂತ ಸಾರ್ವಜನಿಕ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.
ಸೋಮವಾರ ಸಾರಿಗೆ ಇಲಾಖೆ ಸಿಬ್ಬಂದಿ ತಮ್ಮ ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದು, ಸರ್ಕಾರಿ ಬಸ್‌ಗಳು ರಸ್ತೆಗಿಳಿದಿವೆ. ಇದೀಗ ಮುಷ್ಕರದಿಂದ ಸಾರಿಗೆ ಇಲಾಖೆಯ ನಾಲ್ಕು ಸಾರಿಗೆ ನಿಗಮಗಳಿಗೆ ಒಟ್ಟು 64 ಕೋಟಿ ರೂಪಾಯಿ ನಷ್ಟ ಉಂಟಾಗಿದೆ.. ನಾಲ್ಕು ದಿನಗಳ ಮುಷ್ಕರದಿಂದ ಬಿಎಂಟಿಸಿಗೆ 10 ಕೋಟಿ ರೂಪಾಯಿ ನಷ್ಟವಾದ್ರೆ, ಕೆಎಸ್‌ಆರ್ ಟಿಸಿಗೆ 21 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಜೊತೆಗೆ ಮುಷ್ಕರದಿಂದಾಗಿ ರಾಜ್ಯಾದ್ಯಂತ 41 ಕೆಎಸ್‌ಆರ್ ಟಿಸಿ ಬಸ್ ಗಳಿಗೆ ಹಾನಿಯಾಗಿದೆ.ಕೆ ಎಸ್ ಆರ್ ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ ಹೀಗೆ ನಾಲ್ಕು ನಿಗಮಗಳಿಗೆ ಒಟ್ಟು 64 ಕೋಟಿ ನಷ್ಟ ಸಂಭವಿಸಿದೆ ಎಂದು ಬಿಎಂಟಿಸಿ ವ್ಯವಸ್ಥಾಪನಾ ನಿರ್ದೇಶಕಿ ಶಿಖಾ ಹಾಗೂ ಕೆಎಸ್ ಆರ್ ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ಮಾಹಿತಿ ನೀಡಿದ್ದಾರೆ.